ಬೆಂಗಳೂರು:ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ (ನಾಳೆ) ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕ್ರಮಗಳ ವಿಚಾರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಗಲಾಟೆ ನಡೆದ ಸ್ಥಳಗಳು, ನಗರದ ಪಶ್ಚಿಮ ಹಾಗೂ ಉತ್ತರ ವಿಭಾಗಗಳಲ್ಲಿ ತೀವ್ರ ನಿಗಾವಹಿಸಲು ತಿಳಿಸಲಾಗಿದೆ. ಇದರೊಂದಿಗೆ ತಮಿಳುನಾಡಿನಿಂದ ಬಸ್ ಸಂಚರಿಸುವ ಮಾರ್ಗಗಳು, ಬಸ್ ನಿಲ್ದಾಣಗಳು, ತಮಿಳು ಭಾಷಿಕರು ವಾಸಿಸುವ ಕಡೆ ಹೆಚ್ಚಿನ ನಿಗಾ ವಹಿಸಲು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ಮೈಸೂರು ರಸ್ತೆ, ಹೊಸೂರು ರಸ್ತೆ, ಆರ್.ಆರ್.ನಗರ, ಬ್ಯಾಟರಾಯನಪುರ, ಸಿಟಿ ಮಾರ್ಕೆಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ, ಧರಣಿ, ಹೋರಾಟಗಳ ಬಗ್ಗೆ ಮೊದಲೇ ಮಾಹಿತಿ ಪಡೆದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಆಯಾ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಬೇಕು ಎಂದು ಸೂಚಿಸಲಾಗಿದ್ದು, ಮತ್ತಷ್ಟು ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ.
ನಗರದ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ವರೆಗೆ ಮೆರವಣಿಗೆ:ನಾಳೆ ನಗರದ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ವರೆಗೆ ಮೆರವಣಿಗೆ ಮೂಲಕ ಸಾಗಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ಬೆಂಗಳೂರು ಬಂದ್ ಆಗಲಿದೆ. ಐಟಿ ಕನ್ನಡಿಗರ ಬಳಗದ ಮೂರೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ್ಯಾಲಿ ನಡೆಸಲಿದ್ದಾರೆ. ಬಂದ್‌ಗೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. ತಮ್ಮ ಒಕ್ಕೂಟದ ಎಲ್ಲ ಖಾಸಗಿ ಶಾಲೆಗಳು ಬಂದ್ ಮಾಡಲಿದ್ದಾರೆ. ಪರೀಕ್ಷಾ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ನಿನ್ನೆ ಫ್ರೀಡಂ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಚಂದ್ರು ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಬಂದ್‌ಗೆ ಮಂಡ್ಯ ಹಿತರಕ್ಷಣಾ ಸಮಿತಿ ನಿಯೋಗ ಬೆಂಬಲ:ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಮಹತ್ವದ ಸಭೆ ನಡೆಸಿತ್ತು. ಸುಪ್ರೀಂ ಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬಂದ್ ಬೆಂಬಲಿಸಿ ನಾಳೆ ಜಿಲ್ಲೆಯ ಕೆ.ಆರ್.ಪೇಟೆ ಬಂದ್‌ಗೆ ಕಾವೇರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿವೆ. ಪರಿಣಾಮ ಕೆ.ಆರ್.ಪೇಟೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಜನಜೀವನ ಸ್ಥಗಿತಗೊಳ್ಳಲಿದೆ. ಅಗತ್ಯಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಲಿದೆ.
ಇದನ್ನೂ ಓದಿ:ಭದ್ರಾ ನೀರಿಗಾಗಿ ದಾವಣಗೆರೆ ಬಂದ್; ರಸ್ತೆಗಿಳಿದು ರೈತರ ಪ್ರತಿಭಟನೆ