ಬೆಂಗಳೂರು: ಕೊರೊನಾ ವೈರಸ್ ರೂಪಾಂತರಗೊಂಡಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ. ಇದರಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಸಿಲಿಕಾನ್ ಸಿಟಿ ಜನರಿಗೆ ಕೆಲ ಮಾಹಿತಿ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ತಡೆಯಲು ಸದ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇಂದಿನಿಂದ ನಗರದಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಯಾವುದೇ ಕಾರ್ಯಕ್ರಮ ನಡೆಯಲು ಅವಕಾಶ ಇರುವುದಿಲ್ಲ. ಇಂದು ಫ್ಲೈ ಓವರ್ ಮೇಲೆ ಅನಗತ್ಯ ವಾಹನಗಳ ಓಡಾಟ ತಡೆಗೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್ ,ರೆಸ್ಟೋರೆಂಟ್ಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. 2020 ಪ್ರತಿವರ್ಷದಂತೆ ಇರುವುದಿಲ್ಲ. ಕೋವಿಡ್ ನಿಯಮದ ಪ್ರಕಾರ ಎಲ್ಲಾ ಕೆಲಸಗಳು ಮುಗಿಯಬೇಕು. 11 ಗಂಟೆ ರೋಡ್ ಮೇಲೆ ಸಂಚರಿಸಲು ಅವಕಾಶ ಇರುವುದಿಲ್ಲ. ರಾತ್ರಿ ವೇಳೆ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ನಿರ್ಬಂಧವಿಲ್ಲ, ಜನವರಿ 01ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಸರ್ಕಾರದ ನಿಯಗಳನ್ನು ಜನತೆ ಪಾಲಿಸಬೇಕು. ದೂರದೂರುಗಳಿಗೆ ಪ್ರಯಾಣಿಸುವ ಬಸ್, ರೈಲ್ವೆ, ವಿಮಾನಯಾನ ಯಥಾಸ್ಥಿತಿ ಇದ್ದು, ಏರ್ಪೋರ್ಟ್ ಟ್ಯಾಕ್ಸಿ, ರೈಲ್ವೆ ನಿಲ್ದಾಣದ ಬಳಿ ಆಟೋ-ಟ್ಯಾಕ್ಸಿ ಲಭ್ಯ ಇರಲಿವೆ ಎಂದು ತಿಳಿಸಿದರು.