ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿರುವ ಉತ್ಸಾಹವನ್ನು ಯಾವ ಇಲಾಖೆಯಲ್ಲೂ ನೋಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲೂ ಇಷ್ಟೇ ನಿಷ್ಠೆಯಿಂದ ಕೆಲಸ ಮಾಡೋಣ ಎಂದು ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹುರಿದುಂಬಿಸಿದರು.
ಪೊಲೀಸ್ ಸಿಬ್ಬಂದಿಯ ಸೇವಾ ಕವಾಯತು ಉದ್ದೇಶಿಸಿ ಮಾತನಾಡಿದ ಕಮಲ್ ಪಂತ್, ಕೊರೊನಾ ಎರಡನೇ ಅಲೆ ನಂತರ ಮೊದಲ ಬಾರಿ ಪರೇಡ್ ಮಾಡಲಾಗಿದೆ. ಕೊರೊನಾ ಸಮಯದಲ್ಲಿ ನೀವೆಲ್ಲಾ ಉತ್ತಮ ಕೆಲಸ ಮಾಡಿದ್ದೀರಿ. ಲಾಕ್‌ಡೌನ್ ಜಾರಿಯಾದಾಗ ಉತ್ತಮವಾಗಿ ನಿಭಾಯಿಸಿದ್ದೀರಿ. ಈ ವೇಳೆ ಕೆಲ ಸಿಬ್ಬಂದಿಯನ್ನೂ ನಾವು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಪೊಲೀಸ್ ಪರೇಡ್ ಇನ್ನೊಂದು ವಾರದಲ್ಲಿ ಗಣೇಶ ಹಬ್ಬದ ಸಂಭ್ರಮ ಶುರುವಾಗಲಿದೆ. ಪೊಲೀಸರು ಶಾಂತಿಯುತವಾಗಿ ಹಬ್ಬ ನಡೆಸಲು ಶ್ರಮಿಸಬೇಕು. ಗಣೇಶ ಹಬ್ಬಕ್ಕೆ ನಾವು, ಬಿಬಿಎಂಪಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಸರ್ಕಾರದಿಂದ ಬರುವ ಆದೇಶದಂತೆ ಬಂದೋಬಸ್ತ್ ಕೊಡುತ್ತೇವೆ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪಿಸಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಸದ್ಯ ಸರ್ಕಾರದ ಆದೇಶದ ಪ್ರಕಾರ ದೇವಸ್ಥಾನದಲ್ಲಿ ಮಾತ್ರ ಗಣೇಶ ಕೂರಿಸಲು ಅವಕಾಶವಿದೆ ಎಂದರು.
ಕೋರಮಂಗಲ ಕಾರು ಅಪಘಾತ ಪ್ರಕರಣ ಸಂಬಂಧ ವೈಜ್ಞಾನಿಕವಾಗಿ ತನಿಖೆ ನಡೆಯುತ್ತಿದೆ. ದುರ್ಘಟನೆಯಲ್ಲಿ 7 ಜನ ಸತ್ತಿದ್ದಾರೆ. ಮುಂದೆ ಈ ರೀತಿ ಆಗಬಾರದು, ಹಾಗಾಗಿ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಅಂದು ಘಟನೆಗೂ ಮುನ್ನ ಪೊಲೀಸರು ಮನೆಗೆ ಹೋಗಿ ಎಂದು ಅವರಿಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ಅವರು ಮನೆಗೆ ಹೋಗಿ ಬಂದ್ರಾ ಎಂಬುವುದು ಗೊತ್ತಾಗಿಲ್ಲ. ಅದು ದುಃಖದ ಘಟನೆ ಎಂದರು. ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಉತ್ತಮವಾಗಿ ನಡೆಯಲಿ ಎಂದು ಸಿಸಿಬಿಗೆ ಹಸ್ತಾಂತರಿಸಲಾಗಿದೆ ಎಂದರು.
ಇದನ್ನೂ ಓದಿ: ಚನ್ನಪಟ್ಟಣಕ್ಕೆ ಆಗಮಿಸಿದ ಕಿಚ್ಚ ಸುದೀಪ್: ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ