ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿ ಜೊತೆ ಕೆಲ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪದ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿದ್ದಾರೆ.
ಸಿಸಿಬಿ ತನಿಖೆಯಲ್ಲಿ ರವಿ ಪೂಜಾರಿ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬರ್ತಿವೆ. ಸಿಸಿಬಿಯ ಎಸಿಪಿಯೊಬ್ಬರು ರವಿ ಪೂಜಾರಿಗೆ ಕೆಲವೊಂದು ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಮ್ಮಲ್ಲಿರೋ ಅಧಿಕಾರಿಯೊಬ್ಬರು ಸಿಸಿಬಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಸೂಕ್ತ ಅಲ್ಲ. ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಸರ್ಕಾರದ ವಿರುದ್ಧ, ದೇಶದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನರಿಗೆ ಮೋಸ ಮಾಡಿ ದೇಶಕ್ಕೆ ಮೋಸ ಮಾಡಿರೋ ಒಬ್ಬ ಕ್ರಿಮಿನಲ್ ಜೊತೆ ಸಂಪರ್ಕ ಇರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದರು.
ಹಾಗೆಯೇ ರೌಡಿಗಳ ಜೊತೆ ಸಂಪರ್ಕ ಹೊಂದಿರುವ ಪೊಲೀಸರಿಗೆ ಆಯುಕ್ತರು ಖಡಕ್ ಎಚ್ಚರಿಕೆ ನೀಡಿ, ರೌಡಿಗಳ ಜೊತೆ ಸಂಪರ್ಕ ಇರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಸ್ಲಂ ದೊರೆಗಳೇ ಇರಲಿ, ಯಾರೇ ಇರಲಿ ಅವರ ಜೊತೆ ಪೊಲೀಸರು ಸಂಪರ್ಕ ಹೊಂದಿದ್ರೆ, ಕ್ರಿಮಿನಲ್ಗಳ ಜೊತೆ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುವುದು, ಅವರ ಜೊತೆ ವ್ಯವಹಾರಗಳನ್ನ ನಡೆಸೋದು ಗೊತ್ತಾದರೆ ಅವರ ವಿರುದ್ಧ ಕ್ರಮ ಜರುಗಿಸುವುದು ನಿಶ್ಚಿತ ಎಂದು ತಿಳಿಸಿದ್ದಾರೆ.