ಬೆಂಗಳೂರು : ಚುನಾವಣೆ ಬಂದಾಗ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿಕೊಳ್ಳುವ ಅಭ್ಯರ್ಥಿಗಳು ಅಧಿಕಾರದಲ್ಲಿದ್ದಾಗ ಮಾದರಿ ಕ್ಷೇತ್ರವಿರಲಿ, ಮೂಲಸೌಕರ್ಯ ಮರೀಚಿಕೆ ಆಗಿರುವುದು ಅಲ್ಲಲ್ಲಿ ಕಂಡುಬರುತ್ತಿದೆ ಎನ್ನುವುದು ನಗರ ತಜ್ಞರ ಅಭಿಪ್ರಾಯವಾಗಿದೆ.
ಚುನಾವಣಾ ಸನಿಹದಲ್ಲಿರುವಾಗಲೇ ಮತ್ತೆ ಸಚಿವ ಹಾಗೂ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಆಭ್ಯರ್ಥಿಗಳು ಕ್ಷೇತ್ರದ ಮತದಾರರಲ್ಲಿ ಇನ್ನೊಂದು ಅವಧಿಗೆ ಗೆಲ್ಲಿಸಿದರೆ ಸರ್ವಾಂಗೀಣ ಅಭಿವೃದ್ಧಿ ಕಾಯಕ ಜೊತೆಗೆ ಮಾದರಿ ಕ್ಷೇತ್ರ ಮಾಡುವುದಾಗಿ ಉಚಿತ ಭರವಸೆ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ, ಐಟಿ-ಬಿಟಿ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಅಗತ್ಯ ಮೂಲಸೌರ್ಕಯವಿಲ್ಲದೆ ಸೊರಗುತ್ತಿದೆ. ಉದ್ಯೋಗ, ಉತ್ತಮ ಹವಾಮಾನ ಕಾರಣಕ್ಕಾಗಿಯೇ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ವಲಸಿಗರು ಮಹಾನಗರಕ್ಕೆ ಬಂದು ಗೂಡು ಕಟ್ಟಿಕೊಳ್ಳುತ್ತಿದ್ದಾರೆ. ವಸತಿಹೀನ ಪ್ರದೇಶಗಳು ವಸತಿ ಪ್ರದೇಶಗಳಾಗಿ ಪರಿವರ್ತನೆಯಾಗುತ್ತಿವೆ.
ಗಗನಚುಂಬಿ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳ ನಿರ್ಮಾಣ ದಿನೇ ದಿನೇ ಹೆಚ್ಚಾಗುತ್ತಿವೆ. ಮಳೆ ನೀರು ಸರಾಗವಾಗಿ ಹರಿದುಹೋಗುವ ರಾಜಕಾಲುವೆಗಳು ಒತ್ತುವರಿಯಿಂದಾಗಿ ರಾಜಧಾನಿಯಲ್ಲಿ ಸಣ್ಣ ಪ್ರಮಾಣದ ಮಳೆಬಂದರೂ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವುದು ಸರ್ವೇ ಸಾಮಾನ್ಯವಾಗಿದೆ.
ಕಳೆದ ವರ್ಷ ಸುರಿದಿದ್ದ ಮಳೆಗೆ ವೈಟ್ ಫೀಲ್ಡ್, ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್ ಸುತ್ತಮುತ್ತ ಪ್ರದೇಶಗಳಲ್ಲಿರುವ ಐಟಿ ಕಂಪನಿಗಳಿಗೆ ಮಳೆ ನೀರು ನುಗ್ಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಬೆಂಗಳೂರಿಗೆ ಕಪ್ಪು ಚುಪ್ಪೆಯಾಗಿತ್ತು. ಐಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೋಹನ್ ದಾಸ್ ಪೈ, ಬಯೋಕಾನ್ ಸಂಸ್ಥೆಯ ಸಂಸ್ಥಾಪಕಿ ಕಿರಣ್ ಮಜುಂದಾರ್ ಸೇರಿದಂತೆ ಹಲವು ದಿಗ್ಗಜರು ವ್ಯವಸ್ಥೆ ವಿರುದ್ಧ ಕಿಡಿಕಾರಿ ಮೂಲಸೌರ್ಕಯ ಕಲ್ಪಿಸಲು ಒತ್ತಾಯಿಸಿದ್ದರು. ತೆಲಂಗಾಣ ರಾಜ್ಯದ ಐಟಿ ಸಚಿವ ಕೆ ಟಿ ರಾಮರಾವ್ ಅವರು ಬೆಂಗಳೂರು ಮೂಲಸೌಕರ್ಯ ಸರಿಯಿಲ್ಲದಿರುವ ಬಗ್ಗೆ ಆರೋಪಿಸಿ ತಮ್ಮ ತಮ್ಮ ರಾಜ್ಯದಲ್ಲಿ ಕಂಪೆನಿಗಳನ್ನು ಸ್ಥಳಾಂತರಿಸಿದರೆ ಸಕಲ ಸೌಕರ್ಯ ಕಲ್ಪಿಸುವುದಾಗಿ ಕಂಪೆನಿಗಳಿಗೆ ಆಫರ್ ನೀಡಿದ್ದರು. ಇದು ಸರ್ಕಾರದ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾಲುವೆ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ, ಸೂಕ್ತ ಒಳಚರಂಡಿ ನಿರ್ಮಿಸದಿರುವುದು ಮಳೆ ನೀರು ನುಗ್ಗಿ ರಸ್ತೆಗಳು ಕೆರೆಯಂತಾಗಲು ಕಾರಣವಾಗಿದೆ.
1 ಸೆಂಟಿಮೀಟರ್ ಮಳೆ ಬಂದರೂ ಅಕ್ಷರಶಃ ಕೆರೆ: ರಾಜಧಾನಿಯ ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗಲು ಕೇವಲ ಒಂದು ಸೆಂಟಿಮೀಟರ್ ಸಾಕಾಗಿದೆ. ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದರೂ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಜನರು ಬದುಕು ಮೂರಾಬಟ್ಟೆಯಾಗುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್ಎನ್ ಡಿಎಂಸಿ) ನಗರದಲ್ಲಿ ಪ್ರವಾಹ ಸೃಷ್ಟಿಗೆ ಭಾರಿ ಮಳೆ ಅವಶ್ಯಕತೆಯಿಲ್ಲ ಎಂದಿದೆ. ಬಿಬಿಎಂಪಿ ಮೂರು ವಲಯಗಳಲ್ಲಿ ಐದು ಪ್ರದೇಶಗಳು ಜಲಾವೃತಗೊಳ್ಳುತ್ತವೆ.
ಈ ಪೈಕಿ ಮಹದೇವಪುರ ವಲಯದ ವರ್ತೂರು ವಾರ್ಡ್ ನ ಪಣತ್ತೂರು ಮುಖ್ಯರಸ್ತೆ, ದೊಡ್ಡನೆಕ್ಕುಂದಿ ವಾರ್ಡ್ ನ ವಿಬ್ ಗಯಾರ್ ಹೈಸ್ಕೂಲ್, ಯಲಹಂಕ ವಲಯದ ಜಕ್ಕೂರು, ರಾಚೇನಹಳ್ಳಿ, ಪೂರ್ವ ವಲಯದ ಸಿ.ವಿ. ರಾಮನ್ ನಗರದ ಅಬ್ದುಲ್ ಕಲಾಂ ರಸ್ತೆಯಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ಅದೇ ರೀತಿ ವಾಡಿಕೆಗಿಂತ ಹೆಚ್ಚು ಮಳೆ ಬಂದರೆ ನಗರದ ಸಾವಿರಾರು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಲಿವೆ. ಈ ಪೈಕಿ ರಾಜಕಾಲುವೆಯಿಂದ ನೀರು ತುಂಬಿ 109 ಸ್ಥಳಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಬಿಬಿಎಂಪಿಗೆ ಕೆಎಸ್ ಡಿಎಂಸಿ ವರದಿ ನೀಡಿ ಎಚ್ಚರಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯು ಸಮಸ್ಯೆ ಉಲ್ಬಣಗೊಳಿಸಲು ಮತ್ತೊಂದು ಕಾರಣವಾಗಿದೆ ಎಂಬುದು ನಗರ ತಜ್ಞರಾದ ವಿನಯ್ ಶ್ರೀನಿವಾಸ್ ಅಭಿಪ್ರಾಯ.