ಬೆಂಗಳೂರು :ದೇಶದ ಪ್ರಮುಖ ಕಾರ್ಮಿಕ ಸಂಘಟನೆ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ 17ನೇ ಅಖಿಲ ಭಾರತ ಸಮ್ಮೇಳನ ಭಾನುವಾರ ನಗರದಲ್ಲಿ ಸಮಾಪನಗೊಂಡಿತು. ಅರಮನೆ ಮೈದಾನದಲ್ಲಿ ಐದು ದಿನಗಳವರೆಗೆ ಸಿಐಟಿಯು ಕಾರ್ಯಕರ್ತರ ಬೃಹತ್ ಶಕ್ತಿ ಪ್ರದರ್ಶನ ನಡೆದಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ತಪನ್ ಸೇನ್ ಪಾಲ್ಗೊಂಡಿದ್ದರು. "ರಾಷ್ಟ್ರದಲ್ಲಿ ಇಂದು ಉತ್ತಮ ವಾತಾವರಣ ಇಲ್ಲ. ಕೋಮುವಾದ, ಜಾತಿವಾದದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆಯುತ್ತಿದೆ" ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಇಂದು ಜನರಲ್ಲಿ ಐಕ್ಯತೆಯ ಭಾವನೆ ಮೂಡಿಸಲು ಶ್ರಮಿಸಬೇಕು. ಬಲಪಂಥೀಯ ಬಿಜೆಪಿ ಸರ್ಕಾರದ ವಿರುದ್ಧ ನಿಲ್ಲಬೇಕು. ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ಸಂಕಷ್ಟಕ್ಕೀಡಾಗಿದ್ದರೂ ಅವರ ಬೆಂಬಲಕ್ಕೆ ಮುಂದಾಗಬೇಕು. ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಪರ ಮತ್ತು ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿಯಾಗುತ್ತಿದೆ. ದುಡಿಯುವ ಜನರಿಗೆ ಕೆಲಸದ ಸ್ಥಳದಲ್ಲಿ ಕಿರುಕುಳ, ಆರ್ಥಿಕ ಹೊಡೆತ ಸೇರಿದಂತೆ ಸಾಂಕ್ರಾಮಿಕ ರೋಗ ತಂದೊಡ್ಡಿದ ಬಿಕ್ಕಟ್ಟಿನಿಂದ ನಲುಗುತ್ತಿದ್ದಾರೆ" ಎಂದು ಕಾಮ್ರೆಡ್ ತಪನ್ ಸೇನ್ ಹೇಳಿದರು.
ಮುಂದುವರೆದು ಮಾತನಾಡಿ, "ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ, ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಲೇ ಸಾಗಿದ್ದಾರೆ. ಶ್ರೀಮಂತರ ಪರ ಕೆಲಸ ನಿರ್ವಹಿಸುವ ಸರ್ಕಾರಗಳು ಕಾರ್ಮಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಭಾರತದಂತಹ ದೇಶದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ತನ್ನ ಸಾಧನೆಗಳ ಪ್ರಚಾರದ ಹೊರತಾಗಿ ಏನನ್ನೂ ಮಾಡಿಲ್ಲ" ಎಂದರು.