ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೇ ಪರಿಶೀಲಿಸಿ ಕಳಪೆ ಕಾಮಗಾರಿ ಬಯಲು ಮಾಡುತ್ತಿದ್ದಾರೆ. ತರಾತುರಿಯಲ್ಲಿ ಅಸಮರ್ಪಕ ಕೆಲಸ ಮಾಡಲಾಗಿದೆ. ಅದರಲ್ಲೂ ಮನಬಂದಂತೆ ಮಣ್ಣು, ಕಲ್ಲಿನ ಪುಡಿ ಸಿಂಪಡಣೆ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹುತೇಕ ಕಡೆ ಚರಂಡಿಗಳಿಗೆ ನೀರಿನ ಸರಾಗವಾಗಿ ಹರಿಯಲು ಇನ್‌ಲೆಟ್ ಪಾಯಿಂಟ್‌ಗಳಿಲ್ಲ, ಮನಬಂದಂತೆ ರಸ್ತೆ ಕಟಿಂಗ್ ಮಾಡಲಾಗಿದೆ. ಭಾರತೀಯ ರಸ್ತೆ ಕಾಂಗ್ರೆಸ್ ಮಾನದಂಡ(ಐಆರ್‌ಸಿ) ಅನುಸರಿಸಿಲ್ಲ. ಇಂತಹ ಕಳಪೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಲಿವೆ ಎಂದು ದೂರಿದ್ದಾರೆ. ರಸ್ತೆಯ ಗುಣಮಟ್ಟದ ಸಮಸ್ಯೆ ಇದೆ. ಬಹುತೇಕ ಕಡೆ ರಸ್ತೆ ಹಾಳಾಗಲು ಜಲಮಂಡಳಿ ಪೈಪ್‌ಗಳೇ ಕಾರಣ. ಬಿಬಿಎಂಪಿ ರಸ್ತೆಯ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿಲ್ಲ. ಡಾಂಬರಿನ ಗುಣಮಟ್ಟವೂ ನಿಗದಿತ ಪ್ರಮಾಣದಲ್ಲಿಲ್ಲ ಎಂದು ಹಲವು ನಾಗರಿಕರು ಕಿಡಿಕಾರಿದ್ದಾರೆ.
ತಕ್ಷಣ ರಸ್ತೆ ಗುಂಡಿ ಮುಚ್ಚಿ, ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಿ :ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜೊತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಯಿತು. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ಪ್ರಮುಖ ಜಂಕ್ಷನ್ ಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಚರ್ಚಿಸಿ ಜರೂರು ಕ್ರಮಗಳನ್ನು ಕೈಗೊಂಡು ಸುಗಮ ಸಂಚಾರ ದಟ್ಟಣೆ ನಿವಾರಣೆ ಮಾಡಲು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದರು.