ಕರ್ನಾಟಕ

karnataka

ETV Bharat / state

ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಾಗಬೇಕಿದೆ: ಪೃಥ್ವಿ ರೆಡ್ಡಿ

ಬೆಂಗಳೂರಿನ ಅಭಿವೃದ್ಧಿ ಕಾರ್ಯಸೂಚಿ ಬಗ್ಗೆ ರಾಜಕೀಯ ಮುಖಂಡರು ಸಾರ್ವಜನಿಕರ ನಡುವೆ ಚರ್ಚೆ ಕಾರ್ಯಕ್ರಮ-ಜನರ ನಿಜವಾದ ಸಮಸ್ಯೆಗಳ ಬಗ್ಗೆ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ:ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಭಿಮತ.

By

Published : Mar 12, 2023, 6:26 PM IST

Every Vote Matters All Party Town Hall event held in Bangalore
ಬೆಂಗಳೂರಿನಲ್ಲಿ ನಡೆದ ಎವರಿ ವೋಟ್​ ಮ್ಯಾಟರ್ಸ್​ ಆಲ್ ಪಾರ್ಟಿ ಟೌನ್‌ಹಾಲ್​ ಕಾರ್ಯಕ್ರಮ

ಬೆಂಗಳೂರು: ಸರ್ಕಾರದ ಆಡಳಿತ ಹಾಗೂ ನಾಗರಿಕರ ನಡುವೆ ಅಂತರವಿದ್ದು, ಇವರೆಡರ ನಡುವೆ ಸೇತುವೆ ರಚನೆಯಾಗಿ ಒಂದುಗೂಡಿದಾಗ ಮಾತ್ರ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ. ಹೀಗಾಗಿ ಆಡಳಿತದಲ್ಲಿ ನಾಗರಿಕರ ಪಾತ್ರ ಹೆಚ್ಚಾಗಬೇಕಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ನಗರದ ಅಪಾರ್ಟ್‌ಮೆಂಟ್ ಫೆಡರೇಶನ್​ದಿಂದ ನಡೆದ ಸಿಟಿಜನ್ ಮ್ಯಾಟರ್ಸ್ 'ಆಲ್ ಪಾರ್ಟಿ ಟೌನ್‌ಹಾಲ್' ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿವೃದ್ಧಿ ಕಾರ್ಯಸೂಚಿಯ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರ ನಡುವೆ ಚರ್ಚೆಯಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಸ್ಮಾರ್ಟ್‌ ವೋಟ್‌ ಎಂಬ ಸಂಘಟನೆ ಕಟ್ಟಿಕೊಂಡು ಇಂತಹದ್ದೇ ಚರ್ಚೆಗಳನ್ನು ನಡೆಸುತ್ತಿದ್ದೆವು. ಬೇರೆ ಬೇರೆ ವಿಷಯಗಳ ಆಧಾರದಲ್ಲಿ ವೋಟ್‌ ಬ್ಯಾಂಕ್‌ ಸೃಷ್ಟಿಯಾಗುತ್ತದೆ.

ಆದರೆ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತ್ರ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಅಂತಹ ಪ್ರಯತ್ನ ಮಾಡಿದ್ದೆವು. ಅಪಾರ್ಟ್‌ಮೆಂಟ್‌ ನಿವಾಸಿಗಳು ಕೇವಲ ಮತದಾರರು ಅಷ್ಟೇ ಅಲ್ಲ, ಅನೇಕ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಇರುವ ಪ್ರಭಾವಿಗಳು ಕೂಡ ಆಗಿದ್ದಾರೆ ಎಂದು ಹೇಳಿದರು.

ರಾಜಕೀಯ ಸ್ವಚ್ಛಗೊಳಿಸಲು ಎಲ್ಲರೂ ಮುಂದಾಗಬೇಕು:ಇಂದಿನ ರಾಜಕಾರಣದಲ್ಲಿ ಜಾತಿವ್ಯವಸ್ಥೆ ,ಭ್ರಷ್ಟಾಚಾರ, ಗೆಲುವಿಗಾಗಿ ದುಂದುವೆಚ್ಚು ಮಾಡುವುದು,ವಿವಿಧ ಹಗರಣಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುತ್ತಿರುವುದು. ಹೀಗಾಗಿ ರಾಜಕೀಯ ವ್ಯವಸ್ಥೆ ತೀರಾ ಹದಗೆಟ್ಟಿದೆ.ತಮ್ಮೊಂದಿಗೆ ಕೆಲಸ ಮಾಡುವ ನೆರೆಹೊರೆಯವರು, ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ, ಕೆಲಸಗಾರರು, ಚಾಲಕರು ಸೇರಿದಂತೆ ಎಲ್ಲರ ಜೊತೆ ಚರ್ಚಿಸುವ ಅವಕಾಶವಿದೆ. ಅವರು ಇದನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಸರ್ಕಾರದ ನೀತಿಗಳ ಬಗ್ಗೆ ಚರ್ಚೆಯಾಗುವುದು ಮುಖ್ಯ: ಸರ್ಕಾರದ ನೀತಿಗಳ ಬಗ್ಗೆ ಚರ್ಚೆಯಾಗುವುದಕ್ಕಿಂತ ಮುಖ್ಯವಾಗಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಸರ್ಕಾರದ ಆಡಳಿತ ಹಾಗೂ ಜನರ ನಡುವೆ ಹೆಚ್ಚಿನ ಅಂತರವಿದ್ದು, ಇವೆರಡರ ನಡುವೆ ಸೇತುವೆ ನಿರ್ಮಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ಜನಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಸಾಧ್ಯವಾಗುತ್ತದೆ ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

ಹೆಚ್ಚಾಗಬೇಕಿರುವ ನಾಗರಿಕ ಸಹಭಾಗಿತ್ವ: ಒಂದು ರಸ್ತೆಯಲ್ಲಿ ರೇಬಿಸ್‌ ಕಾಯಿಲೆಯಿರುವ ನಾಯಿಯೊಂದು ಜನರಿಗೆ ಕಚ್ಚುತ್ತಿರುವುದು ಸರ್ಕಾರ ಕಚೇರಿಯಲ್ಲಿ ಕುಳಿತಿರುವವರಿಗೆ ತಿಳಿಯಬೇಕೆಂದರೆ, ಜನರೇ ಅಧಿಕಾರಿಗೆ ಮಾಹಿತಿ ನೀಡಬೇಕು. ದೆಹಲಿ ಸರ್ಕಾರದ ಅನೇಕ ಯೋಜನೆಗಳು ಜನರು ನೀಡಿದ ಸಲಹೆಗಳ ಆಧಾರದಲ್ಲಿ ರೂಪಿಸಲ್ಪಟ್ಟಿವೆ. ಆದ್ದರಿಂದಲೇ ಅವು ಯಶಸ್ವಿಯಾಗಿವೆ. ಕರ್ನಾಟಕದಲ್ಲಿ ಕೂಡ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಾಗಬೇಕು ಎಂದು ಹೇಳಿದರು.

ಮಲ್ಲೇಶ್ವರಂ ಶಾಸಕ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಬಿ.ಟಿ.ಎಂ ಲೇಔಟ್ ಶಾಸಕ, ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿ, ಜೆಡಿಎಸ್‌ ವಕ್ತಾರ ತನ್ವೀರ್‌ ಅಹಮದ್‌ ಸೇರಿದಂತೆ ಹಲವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂಓದಿ:ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ 600 ಕೋಟಿ ಅಕ್ರಮ ಪತ್ತೆ ಹಚ್ಚಿದ ಇಡಿ : ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ

ABOUT THE AUTHOR

...view details