ಕರ್ನಾಟಕ

karnataka

ETV Bharat / state

ದಂಡಕ್ಕೂ ಬಗ್ಗದ ಸಿಲಿಕಾನ್ ಸಿಟಿ ಜನ: ಫೈನ್ ಹಾಕಿದ್ರೂ ಪ್ಲಾಸ್ಟಿಕ್ ಬಳಕೆಗೆ ನೋ ಬ್ರೇಕ್!

ಪ್ಲಾಸ್ಟಿಕ್​ ಕೈ ಚೀಲಗಳನ್ನು ಬಳಸದಂತೆ ನಿಷೇಧ ಹೇರಿದ್ರು, ಸಿಲಿಕಾನ್​ ಸಿಟಿಯಲ್ಲಿ ಸಾರ್ವಜನಿಕರು ಮಾತ್ರ ಬಳಸುತ್ತಿದ್ದಾರೆ. ಅಂಗಡಿ, ಹೋಟೇಲ್​ಗಳಿಗೆ ಫೈನ್ ಹಾಕಿ, ಪರವಾನಗಿ ರದ್ದು ಮಾಡಿದ ಬಳಿಕವೂ ಪ್ಲಾಸ್ಟಿಕ್ ಬಳಕೆ‌ ಮುಂದುವರೆಸಿದ್ರೆ ಏನು ಮಾಡಲು ಸಾಧ್ಯ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ.

By

Published : Nov 12, 2019, 6:25 PM IST

ಫೈನ್ ಹಾಕಿದ್ರೂ ಪ್ಲಾಸ್ಟಿಕ್ ಬಳಕೆಗೆ ನೋ ಬ್ರೇಕ್

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ, ಒಂಚೂರೂ ಕಡಿವಾಣ ಬಿದ್ದಿಲ್ಲ. ಹೌದು, ಗ್ರಾಹಕರು ಹತ್ತು ರೂಪಾಯಿ ತರಕಾರಿ ತಗೊಂಡ್ರೂ ವ್ಯಾಪಾರಸ್ಥರು ಅವರಿಗೆ ನಿಷೇಧಿತ ಪ್ಲಾಸ್ಟಿಕ್ ನೀಡಬೇಕಾಗಿದೆ. ಒಂದು ವೇಳೆ ನೀಡದಿದ್ರೆ ಗ್ರಾಹಕರು ಖರೀದಿಸದೇ ತೆರಳುತ್ತಾರೆ. ಪ್ಲಾಸ್ಟಿಕ್ ಕೈಚೀಲಗಳನ್ನು ರದ್ದು ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಹೇಳಬಹುದಾಗಿದೆ.

ಅಂಗಡಿ, ಹೋಟೆಲ್​ಗಳಿಗೆ ಫೈನ್ ಹಾಕಿ, ಪರವಾನಗಿ ರದ್ದು ಮಾಡಿದ ಬಳಿಕವೂ ಪ್ಲಾಸ್ಟಿಕ್ ಬಳಕೆ‌ ಮುಂದುವರೆಸಿದ್ರೆ ಏನು ಮಾಡಲು ಸಾಧ್ಯ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆದಾರರಿಗೆ ವಿಧಿಸಿರುವ ದಂಡ, ಬೆಚ್ಚಿಬೀಳಿಸುವಂತಿದೆ. ಅಕ್ಟೋಬರ್ ಒಂದರಿಂದ ನವೆಂಬರ್ ಹತ್ತರವರೆಗೆ ಎಂಟು ಲಕ್ಷದವರೆಗೂ ದಂಡ ವಿಧಿಸಲಾಗಿದೆ. ಅಕ್ಟೋಬರ್ ಒಂದು ತಿಂಗಳಲ್ಲೇ ಒಟ್ಟು 764 ಸಾರ್ವಜನಿಕರಿಂದ 6,12,810 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇನ್ನು ನವೆಂಬರ್ ಹತ್ತನೇ ತಾರೀಕಿನವರೆಗೆ 331 ಜನರಿಗೆ 2,02,365 ರೂಪಾಯಿ ದಂಡ ಹಾಕಲಾಗಿದೆ. ಇಷ್ಟಾದ್ರೂ ಸಾರ್ವಜನಿಕರು ಮಾತ್ರ ಎಚ್ಚೆತ್ತುಕೊಂಡಿಲ್ಲ.

ಫೈನ್ ಹಾಕಿದ್ರೂ ಪ್ಲಾಸ್ಟಿಕ್ ಬಳಕೆಗೆ ನೋ ಬ್ರೇಕ್

ಎಲ್ಲ ವಿಧಧ ಪ್ಲಾಸ್ಟಿಕ್ ಬಳಕೆ, 2016 ರಿಂದಲೇ ಬ್ಯಾನ್ ಆಗಿದ್ರೂ, ಕಳೆದ ಕೆಲ ತಿಂಗಳಿಂದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ಮಂಡಳಿ ಜಂಟಿಯಾಗಿ ಕೆಲಸ ನಿರ್ವಹಿಸಿತು. ಜನಜಾಗೃತಿ ಮೂಡಿಸಲು, ಪ್ಲಾಸ್ಟಿಕ್ ನಿಷೇಧ ಮೇಳಗಳನ್ನೂ ನಡೆಸಲಾಯ್ತು. ಆದ್ರೂ ಕೂಡ ರಾಜಧಾನಿ ಜನರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಇನ್ನು ಅಂಗಡಿ, ಮಳಿಗೆ, ಮಾರುಕಟ್ಟೆಗಳಲ್ಲೂ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ.

ನಗರದ ಕೆ.ಆರ್​​. ಮಾರುಕಟ್ಟೆಯಲ್ಲೇ ಹೂವು, ಹಣ್ಣು, ತರಕಾರಿ ಮಾರಾಟಗಾರರು ಪ್ಲಾಸ್ಟಿಕ್ ಕೈ ಚೀಲದಲ್ಲೇ ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿದ್ದಾರೆ. ವ್ಯಾಪಾರಿಗಳನ್ನು ಕೇಳಿದ್ರೆ, ಜನರಿಗೆ ಪ್ಲಾಸ್ಟಿಕ್ ನೀಡದಿದ್ರೆ ನಮಗೆ ವ್ಯಾಪಾರ ಇಲ್ಲದೆ ನಷ್ಟ ಆಗುತ್ತೆ. ಅದಕ್ಕೇ ಕೊಡ್ತೇವೆ ಅನ್ತಾರೆ ಕೆ.ಆರ್. ಮಾರುಕಟ್ಟೆ ವ್ಯಾಪಾರಿ ಮುದಾಸಿರ್.

ಪಾಲಿಕೆಯ ಮೆಡಿಕಲ್ ಹೆಲ್ತ್ ಆಫೀಸರ್ ಸಂಧ್ಯಾ ಪ್ರತಿಕ್ರಿಯಿಸಿ, ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ ಸೂಕ್ತ ತರಬೇತಿ ನೀಡಿದ ಬಳಿಕವೂ, ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬಂದಾಗ ದಂಡ ವಿಧಿಸಲಾಗಿದೆ. ಪ್ರತೀ ಹೋಟೆಲ್​​​ನಲ್ಲಿ ಬಳಕೆ ಮಾಡಿದಾಗಲೂ, 25 ರಿಂದ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೇ ಕೆ.ಆರ್. ಮಾರುಕಟ್ಟೆ, ಅವೆನ್ಯೂ ರಸ್ತೆ, ಕಲಾಸಿಪಾಳ್ಯಗಳಲ್ಲಿ ಜಪ್ತಿ ಮಾಡಿದಾಗ ಎರಡು ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಪಡಿಸಿದ್ದೇವೆ. ದಂಡ ಹಾಕಿ, ಪರವಾನಗಿ ರದ್ದು ಮಾಡಿದ್ರೂ ಬಳಸ್ತಾರೆ ಅಂದ್ರೆ ಬೇರೇನು ಮಾಡ್ಬೇಕು ಅನ್ನೋದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.

ABOUT THE AUTHOR

...view details