ಬೆಂಗಳೂರು: ''ಮುಂದಿನ ತಿಂಗಳು ನೆಡೆಯುವ ಸಿಐಐ ಶೃಂಗಸಭೆಯಲ್ಲಿ ಸುಧಾರಿತ ಉತ್ಪಾದನೆ, ಚಲನಶೀಲತೆ, ಆರೋಗ್ಯ, ಹಣಕಾಸು, ಏರೋಸ್ಪೇಸ್ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಲಯಗಳ ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ'' ಎಂದು ಸಿಐಐ ಮಾಜಿ ಅಧ್ಯಕ್ಷ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಿಐಐ 19ನೇ ಇನ್ನೋವೇಶನ್ ಶೃಂಗಸಭೆ ಇನ್ನೋವರ್ಜ್-2023 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಇನ್ನೋವರ್ಜ್ ಶೃಂಗಸಭೆಯ ಆಗಸ್ಟ್ 17 ರಿಂದ 19 ರವರೆಗೆ ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನ ಹೋಟೆಲ್ ಹಿಲ್ಟನ್‌ನಲ್ಲಿ ನಡೆಯಲಿದೆ. ಆರ್ ಆ್ಯಂಡ್ ಡಿ ಪ್ರಯತ್ನಗಳೊಂದಿಗೆ ನಮ್ಮ ಸ್ವಂತ ತಂತ್ರಜ್ಞಾನದ ಬೆಳವಣಿಗೆಯ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ಪ್ರಗತಿಯ ಮೇಲೆಯೂ ಚರ್ಚೆಯಾಗುತ್ತದೆ. ಪ್ರತಿಭೆ, ತಂತ್ರಜ್ಞಾನ ಮತ್ತು ದೃಢತೆಯ ಕುರಿತ ಸಮ್ಮೇಳನವು ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ'' ಎಂದರು.
ಸಿಐಐ ಅಧ್ಯಕ್ಷ ಹಾಗೂ ವೋಲ್ವೋ ಗ್ರೂಪ್ ಇಂಡಿಯಾದ ಹಿರಿಯ ಅಧ್ಯಕ್ಷ ಕಮಲ್‌ಬಾಲಿ ಮಾತನಾಡಿ, ''ಭಾರತೀಯ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಂಸ್ಕೃತಿಯನ್ನು ಬೆಳೆಸಲು ಶೃಂಗಸಭೆ ಕಾರ್ಯನಿರ್ವಹಿಸಲಿದೆ. ಭವಿಷ್ಯ ರೂಪಿಸುವಲ್ಲಿ ಅಗತ್ಯ ಚರ್ಚೆಗಳು ನಡೆಯಲಿವೆ'' ಎಂದು ತಿಳಿಸಿದರು.
''ಈ ಶೃಂಗಸಭೆ ಒಂಬತ್ತು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವಾಲಯಗಳು, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಪ್ರಮಾಣದ ಕೈಗಾರಿಕಾ ಇಲಾಖೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರಗಳು ಪ್ರಮುಖ ಪಾಲುದಾರರಾಗಿ ಭಾಗಿಯಾಗಲಿದ್ದಾರೆ'' ಎಂದು ಅವರು ಮಾಹಿತಿ ನೀಡಿದರು.