ಬೆಂಗಳೂರು :ವಸಿಷ್ಠ ಸಹಕಾರಿ ಬ್ಯಾಂಕ್ನಲ್ಲಿ ಠೇವಣಿದಾರರಿಂದ ಹಣ ಪಾವತಿಸಿಕೊಂಡು ನೂರಾರು ಗ್ರಾಹಕರಿಗೆ ಠೇವಣಿ ವಂಚನೆ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಆದೇಶಿಸಿದ್ದಾರೆ.
ಕಳೆದ ಜುಲೈನಲ್ಲಿ ಹನುಮಂತ ನಗರದಲ್ಲಿರುವ ವಸಿಷ್ಠ ಸಹಕಾರಿ ಬ್ಯಾಂಕ್ ಠೇವಣಿದಾರರು ಹೂಡಿದ ಹಣ ಹಿಂತಿರುಗಿಸದೆ ವಂಚಿಸಿದೆ ಎಂದು ಆಪಾದಿಸಿ ಬ್ಯಾಂಕ್ ಮುಂದೆ ಗ್ರಾಹಕರು ಪ್ರತಿಭಟಿಸಿದ್ದರು. ಬಳಿಕ ಬ್ಯಾಂಕ್ ಸಿಇಒ ವೆಂಕಟನಾರಾಯಣ ಸೇರಿದಂತೆ ಆಡಳಿತ ಮಂಡಳಿ ವಿರುದ್ಧ 128 ಮಂದಿ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದು, 19 ಕೋಟಿ ನಷ್ಟವಾಗಿದೆ ಎಂದು ಠೇವಣಿದಾರರು ಆರೋಪಿಸಿದ್ದರು.
ದೂರು ಸ್ವೀಕರಿಸಿ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸಂದೀಪ್ ನೇತೃತ್ವದ ತಂಡ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿ ಅಗತ್ಯ ದಾಖಲಾತಿಗಳನ್ನು ವಶಕ್ಕೆ ಪಡೆದಿತ್ತು. ಈ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆ ಎಡಿಜಿಪಿ ಹಿತೇಂದ್ರ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಆದೇಶಿಸಿದ್ದಾರೆ.