ಬೆಂಗಳೂರು: ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 5ರಂದು ನಡೆದಿದ್ದ ಚಂದ್ರು ಕೊಲೆ ಪ್ರಕರಣ ಸಂಬಂಧ ಸಿಐಡಿ ತನಿಖೆ ಪೂರ್ಣಗೊಳಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಭಾಷಾ ವಿಚಾರಕ್ಕಾಗಿ ಚಂದ್ರು ಕೊಲೆಯಾಗಿದ್ದು, ಈ ಸಂಬಂಧ ನಾಲ್ವರು ಆರೋಪಿಗಳಾದ ಶಾಹೀದ್ ಪಾಷಾ, ಶಾಹೀದ್ ಪಾಷಾ ಅಲಿಯಾಸ್ ಗೇಣಾ ಮೊಹಮ್ಮದ್ ನಬೀಲ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದವನನ್ನು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ವೇಳೆ 49 ಜನರನ್ನು ಸಾಕ್ಷ್ಯಾಧಾರರನ್ನಾಗಿ ಮಾಡಲಾಗಿದ್ದು, ಆರೋಪಿತರ ವಿರುದ್ಧ ಒಟ್ಟು 171 ಪುಟಗಳ ದೋಷಾರೋಪ ಪಟ್ಟಿಯನ್ನು ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ನಂದಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಏನಿದೆ?: ಹಳೆ ಗುಡ್ದದಹಳ್ಳಿ ನಿವಾಸಿ ಸೈಮನ್ ರಾಜ್ ಏಪ್ರಿಲ್ 5ರಂದು ಹುಟ್ಟುಹಬ್ಬದ ಹಿನ್ನೆಲೆ ಮನೆ ಬಳಿ ಸಂಭ್ರಮಾಚರಣೆ ಮಾಡಿ ಸ್ನೇಹಿತ ಚಂದ್ರುನನ್ನೇ ಕರೆದುಕೊಂಡು ಚಿಕನ್ ರೋಲ್ ಕೊಡಿಸಲು ಆ್ಯಕ್ಟಿವಾ ಹೊಂಡಾ ಸ್ಕೂಟರ್ ನೊಂದಿಗೆ ಹಳೆಗುಡ್ಡದಹಳ್ಳಿ 9ನೇ ಅಡ್ಡರಸ್ತೆ ಬಳಿ ಬರುತ್ತಿದ್ದ. ಈ ವೇಳೆ, ಅದೇ ದಾರಿಯಲ್ಲೇ ನಡೆದುಕೊಂಡು ಬರುತ್ತಿದ್ದ ಆರೋಪಿ ಶಾಹೀದ್, ಕ್ಯಾರೇ ಮುಜೆ ಗಾಲಿ ದಿಯಾ ಎಂದು ಸೈಮನ್ ತಾಯಿ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಆದರೂ ನಿನ್ನನ್ನು ಬೈದಿಲ್ಲ ಹೋಗು ಎಂದು ಹೇಳಿ ಕಳುಹಿಸಿದ್ದ.
ಸಮೀಪದ ಬೇಕರಿ ಬಳಿಯಿರುವಾಗ ಶಾಹೀದ್ ಮತ್ತೇ ಬೈಗುಳ ಮುಂದುವರಿಸಿದ್ದ. ಇದರಿಂದ ಕೋಪಗೊಂಡ ಇವರಿಬ್ಬರೂ ಆರೋಪಿಯನ್ನ ತಳ್ಳಿದ್ದಾರೆ. ಅಕ್ರೋಶಗೊಂಡ ಶಾಹೀದ್ ಯಾರ್ ಕರೀತೀಯ ಕರಿ ನೋಡ್ತೇನೆ ಎಂದು ಧಮಕಿ ಹಾಕಿದ್ದಾನೆ. ಸೈಮನ್ ಸಹ ನೀನು ಸಹ ಯಾರನ್ನು ಬೇಕಾದರೂ ಕರಿ ಎಂದು ಹೇಳಿದ್ದಕ್ಕೆ ಕನ್ನಡ ನಹೀ ಆತಾ ಉರ್ದು ಮೇ ಬೋಲೊ ಎಂದು ಜಗಳ ಆಡಿ ಹಲ್ಲೆಗೆ ಮುಂದಾಗಿದ್ದಾರೆ.