ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಪ್ರಮುಖ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಮೂವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಜಯನಗರದಲ್ಲಿರುವ ಶ್ರೀಕೃಷ್ಣ ಮನೆ, ಸಂಜಯನಗರದಲ್ಲಿರುವ ಸುನೀಶ್ ಹೆಗ್ಡೆ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ಮಾಹಿತಿಗಳನ್ನ ಕಲೆ ಹಾಕಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಡಾರ್ಕ್ ವೆಬ್ ಮೂಲಕ ಹೈಡ್ರೊ ಗಾಂಜಾ ತರಿಸಿ ಸೇವನೆ ಮಾಡುತ್ತಿದ್ದ ಆರೋಪದಡಿ ಶ್ರೀಕಿ ಹಾಗೂ ಇತರರ ವಿರುದ್ಧ 2020 ರಲ್ಲಿ ಕೆಂಪೇಗೌಡ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಸರ್ಕಾರಿ ವೆಬ್ ಸೈಟ್ ಹಾಗೂ ಅಂತಾರಾಷ್ಟ್ರೀಯ ಜಾಲತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ಗಳಾಗಿ ಪರಿವರ್ತಿಸಿ ಕೋಟ್ಯಂತರ ರೂಪಾಯಿ ಹಣ ವಂಚಿಸಿರುವುದು ಗೊತ್ತಾಗಿತ್ತು. ಈ ಸಂಬಂಧ ಸಿಸಿಬಿಗೆ ಪ್ರಕರಣ ಹಸ್ತಾಂತರವಾಗಿತ್ತು. ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಬಿಟ್ ಕಾಯಿನ್ ದಂಧೆಯಲ್ಲಿ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಮರುತನಿಖೆ ನಡೆಸಲು ಸಿಐಡಿ ವಹಿಸಿತ್ತು. ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ಚುರುಕುಗೊಳಿಸಿತ್ತು. ನೋಟಿಸ್ ನೀಡಿ ವಿಚಾರಣೆ ಎದುರಿಸಿದ್ದ ಶ್ರೀ ಕೃಷ್ಣ, ತನ್ನನ್ನು ಬೆದರಿಸಿ ಪೊಲೀಸ್ ಅಧಿಕಾರಿಗಳು ಕೆಲ ರಾಜಕಾರಣಿಗಳು ನೂರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ಗಳನ್ನ ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಹೇಳಿಕೆ ನೀಡಿರುವುದು ಮೂಲಗಳಿಂದ ತಿಳಿದುಬಂದಿತ್ತು.
ಈ ಸಂಬಂಧ ಆಗಿನ ಸಿಸಿಬಿ ಇನ್ಸ್ಪೆಕ್ಟರ್ ಸೇರಿ ಇತರ ಪೊಲೀಸರ ವಿರುದ್ಧ ಕಳೆದ ಆಗಸ್ಟ್ 9 ರಂದು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗಾಗಲೇ ಕೆಲ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಬಿಟ್ ಕಾಯಿನ್ ದಂಧೆಯಲ್ಲಿ ಅಕ್ರಮ ಹೇಗಾಯಿತು ಎಂಬುದರ ಬಗ್ಗೆ ಶ್ರೀ ಕೃಷ್ಣನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ಶ್ರೀಕಿ ಮನೆ ಮೇಲೆ ದಾಳಿ ನಡೆಸಿ ಮಹತ್ವದ ಮಾಹಿತಿಗಳನ್ನು ಸಿಐಡಿ ಕಲೆ ಹಾಕಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಸಚಿವ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲು.. ಜಾತಿ ನಿಂದನೆಯಾಗಿದ್ದರೆ ರಾಜೀನಾಮೆ ನೀಡಲಿ ಎಂದ ಬಸವರಾಜ ಬೊಮ್ಮಾಯಿ