ಬೆಂಗಳೂರು: 20ನೇ ವರ್ಷದ ಚಿತ್ರಸಂತೆ 2023ರ ಜನವರಿ 8 ರಂದು ನಡೆಯಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ನಡೆಯಲಿದೆ. ಭೌತಿಕವಾಗಿ ಮತ್ತು ಆನ್ಲೈನ್ ಎರಡೂ ರೂಪದಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗುತ್ತದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಚಿತ್ರಸಂತೆಗೆ 18 ರಿಂದ 20 ರಾಜ್ಯಗಳಿಂದ ಕಲಾವಿದರು ಆಗಮಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ಸಿ ಎನ್ ಅಶ್ವತ್ಥ ನಾರಾಯಣರಿಂದ ಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ ಎಂದರು.
ಚಿತ್ರಸಂತೆಯಲ್ಲಿ ಕಲಾ ಪ್ರೇಮಿಗಳಿಗೆ 100 ರೂಪಾಯಿಗಳಿಂದ ಲಕ್ಷದವರೆಗೆ ಕಲಾಕೃತಿಗಳು ದೊರೆಯುತ್ತವೆ. ಚಿತ್ರಸಂತೆಯಲ್ಲಿ ಭಾಗವಹಿಸುವ 1500ಕ್ಕೂ ಅಧಿಕ ಕಲಾವಿದರಿಗೆ ಊಟ, ತಿಂಡಿ, ನೀರು ಮತ್ತು ಕಲಾಕೃತಿಗಳ ಮಾರಾಟಕ್ಕೆ ಮಳಿಗೆಯನ್ನು ಉಚಿತವಾಗಿ ಒದಗಿಸಲಾಗುತ್ತದೆ. ಬೇರೆ ಊರುಗಳಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಪರಿಷತ್ತು ಉಚಿತವಾಗಿ ಕೊಡಲಿದೆ ಎಂದು ಮಾಹಿತಿ ನೀಡಿದರು.
ವ್ಯಂಗ್ಯಚಿತ್ರಗಳ ಪ್ರದರ್ಶನ:ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮ್ಯಾನರ್ವರೆಗಿನ ಕುಮಾರ ಕೃಪಾ ರಸ್ತೆಯಲ್ಲಿ ಹಾಗೂ ಕ್ರೆಸೆಂಟ್ ರಸ್ತೆಯ ಸ್ವಲ್ಪ ಭಾಗದಲ್ಲಿ ಕಲಾಕೃತಿಗಳ ಪ್ರದರ್ಶನವಿರುತ್ತದೆ. ಭಾರತ ಸೇವಾದಳ ಆವರಣ, ಕ್ರೆಸೆಂಟ್ ಮತ್ತು ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ನಾಲ್ವರು ಕಲಾವಿದರಿಗೆ 'ಚಿತ್ರಕಲಾ ಸಮ್ಮಾನ್' ಪ್ರಶಸ್ತಿ ಹಾಗು ನಂಜುಂಡರಾವ್ ಪ್ರಶಸ್ತಿ ನೀಡಲಿದ್ದು ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.
ಪ್ರಶಸ್ತಿಗಳ ವಿವರ:
1. ಪ್ರೊ ಎಂ ಎಸ್ ನಂಜುಂಡರಾವ್ ಪ್ರಶಸ್ತಿ (1 ಲಕ್ಷ )
2. ಹೆಚ್. ಕೆ. ಕೇಜ್ರಿವಾಲ್ ಪ್ರಶಸ್ತಿ (50 ಸಾವಿರ )
3. ಎಂ ಆರ್ಯಮೂರ್ತಿ ಪ್ರಶಸ್ತಿ ( 50 ಸಾವಿರ )
4. ಡಿ. ದೇವರಾಜ ಅರಸು ಪ್ರಶಸ್ತಿ ( 50 ಸಾವಿರ )
5. ವೈ. ಸುಬ್ರಮಣ್ಯರಾಜು ಪ್ರಶಸ್ತಿ (50 ಸಾವಿರ )
ಆನ್ಲೈನ್ ಸಂತೆ: ಕೋವಿಡ್ ಸಮಯದಲ್ಲಿ ಆಯೋಜಿಸಿದ್ದ ಆನ್ಲೈನ್ ಚಿತ್ರಸಂತೆಗೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಕಳೆದ ಆನ್ಲೈನ್ ಚಿತ್ರಸಂತೆಯನ್ನು11 ಲಕ್ಷ ಜನ ವೀಕ್ಷಿಸಿದ್ದರು. 72 ದೇಶದ ಜನರು ಈ ಚಿತ್ರಸಂತೆಯಲ್ಲಿ ಆನ್ಲೈನ್ ಮೂಲಕ ಭಾಗಿಯಾಗಿದ್ದರು. ಹಾಗಾಗಿ ಈ ಬಾರಿ ಯಾವ ರೀತಿ ಅನ್ಲೈನ್ ಮೂಲಕ ಚಿತ್ರಸಂತೆ ಮಾಡಬಹುದು ಎಂದು ಯೋಚಿಸುತ್ತಿದ್ದೇವೆ ಎಂದರು.
ಬೇರೆ ಬೇರೆ ಕ್ಷೇತ್ರದಲ್ಲಿ ಆನ್ಲೈನ್ ವ್ಯವಸ್ಥೆ ಹೆಚ್ಚಾಗಿದೆ. ಆದರೆ ಚಿತ್ರಕಲೆಯಲ್ಲಿ ಇನ್ನೂ ಕಾರ್ಯಪ್ರವತ್ತಿಗೆ ಬಂದಿಲ್ಲ, ಇರುವ ಮಿತಿಯಲ್ಲಿಯೇ ಆನ್ಲೈನ್ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಆನ್ಲೈನ್ ಮೂಲಕ ಕಲಾಕೃತಿಗಳ ಮಾರಾಟ: ಚಿತ್ರಕಲಾ ಪರಿಷತ್ ನ ಪದಾಧಿಕಾರಿ ಶಶಿಧರ್ ಮಾತನಾಡಿ, ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಆನ್ಲೈನ್ ವೇದಿಕೆ ಮಾಡಲು ನಿರ್ಧರಿಸಿದ್ದೇವೆ. ಸದ್ಯಕ್ಕೆ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶ ಮಾತ್ರ ನಮ್ಮದಾಗಿದೆ, ನಾವು ವಾಣಿಜ್ಯ ಉದ್ದೇಶ ಹೊಂದಿಲ್ಲ, ಎರಡನೇ ಹಂತದಲ್ಲಿ ಆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ:ಪೊಲೀಸ್ಠಾಣೆಗಳು ಜ್ಞಾನಾರ್ಜನೆಯ ಕೇಂದ್ರಗಳಾಗಲಿ: ಡಿಸಿಪಿ ಬಾಬಾ