ಬೆಂಗಳೂರು:ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2010ರಲ್ಲಿ ಬಾಂಬ್ ಸ್ಫೋಟಿಸಿದ್ದ ಇಬ್ಬರು ಆರೋಪಿಗಳಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ ನಾಲ್ಕು ಲಕ್ಷ ದಂಡ ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಆರೋಪಿಗಳಾದ ಅಹ್ಮದ್ ಜಮಾಲ್ ಹಾಗು ಅಫ್ತಾಬ್ ಅಲಮ್ ಅಲಿಯಾಸ್ ಫಾರೂಕ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಆರ್.ಎಚ್ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. 2010ರ ಏಪ್ರಿಲ್ 17 ರಂದು ಚಿನ್ನಸ್ವಾಮಿ ಸ್ಟೇಡಿಂಯ ಬಳಿ ಎರಡು ಬಾಂಬ್ಗಳು ಸ್ಫೋಟಿಸಿ 15 ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ್ದರು.
ತಪ್ಪೊಪ್ಪಿಗೆಯಲ್ಲೇನಿತ್ತು: ಬೆಂಗಳೂರಿನ ಸೆಷನ್ಸ್ ಕೋರ್ಟ್ ಆವರಣದಲ್ಲಿರುವ ಎನ್ಐಎ ನ್ಯಾಯಾಲಯದ ಮುಂದೆ ಆರೋಪಿಗಳಾದ ಅಹಮ್ಮದ್ ಜಮಾಲ್ ಹಾಗು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ತಪ್ಪೊಪ್ಪಿಕೊಂಡು, ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಸಕ್ರಿಯಾರಾಗಿದ್ದೆವು. ಲಷ್ಕರ್ ಇ-ತೋಯ್ಬಾ ಸಂಘಟನೆಯಿಂದ ಆರ್ಥಿಕ ಸಹಾಯ ಪಡೆದು ದಿಲ್ಲಿಯ ಜಾಮೀಯಾ ನಗರದ ಮನೆಯೊಂದರಲ್ಲಿ ಸಂಚು ರೂಪಿಸಿ, ಬಾಂಬ್ ಸ್ಫೋಟಗೊಂಡ ಸ್ಥಳವನ್ನು ಪ್ರಕರಣದ ಪ್ರಮುಖ ಆರೋಪಿ ಮಹಮದ್ ಯಾಸಿನ್ ನಿರ್ದೇಶನದಂತೆ ಗುರುತಿಸಲಾಗಿತ್ತು.
ಮೊದಲಿಗೆ ಬೆಂಗಳೂರಿನ ಸದಾಶಿವನಗರ ಹಾಗು ತುಮಕೂರಿನ ಮಧ್ಯದಲ್ಲಿ ಸ್ಫೋಟಿಸುವ ಸಂಚು ರೂಪಿಸಲಾಗಿತ್ತು. ನಂತರ ಸ್ಥಳ ಬದಲಾಯಿಸಿ, ತುಮಕೂರಿನಿಂದ ಬೆಂಗಳೂರಿಗೆ ತಂದಿದ್ದ ಸ್ಪೋಟಕಗಳನ್ನು ಯಾಸಿನ್ ಮತ್ತಿತರ ನಾಲ್ವರು ಆರೋಪಿಗಳ ನೆರವಿನೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 5 ಸ್ಪೋಟಕಗಳನ್ನು ಅಳವಡಿಸಿದ್ದೆವು. ಅದರಂತೆ ಗೇಟ್ ನಂಬರ್ 12 ರಲ್ಲಿದ್ದ ಬಾಂಬ್ ಸ್ಪೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಕೂಡಲೇ ಪೊಲೀಸರು ಉಳಿದ ನಾಲ್ಕು ಬಾಂಬ್ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದರು.