ಬೆಂಗಳೂರು: ನಮ್ಮ ದೇಶದ ಜೊತೆ ಚೀನಾ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕುತಂತ್ರದಿಂದ ಹಿಂದಿನಿಂದ ಮುಚ್ಚುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಚೀನಾ - ಭಾರತ ಗಡಿಯಲ್ಲಿ ಸೈನಿಕರ ಘರ್ಷಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂದೆ ನೆಹರು ಕಾಲದಲ್ಲೂ ಅವರು ದಾಳಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಚೀನಾದವರಿಗೆ ಅಷ್ಟೊಂದು ಬೆಲೆ ಕೊಡಬಾರದಿತ್ತು. ನೆರೆಹೊರೆಯವರು ಅಂತ ಇವರು ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ. ಇಷ್ಟಾದರೂ ಚೀನಾ ಬ್ಯಾಕ್ ಸ್ಟಾಂಪಿಂಗ್ ಮಾಡೋದು ಬಿಟ್ಟಿಲ್ಲ. ಕಣ್ಣಾಮುಚ್ಚಾಲೆ ಆಟವನ್ನ ಆಡ್ತಿದೆ. ಇವತ್ತು ಇಡೀ ದೇಶದ ಜನ ಒಂದಾಗಿದ್ದಾರೆ. ಇವತ್ತು ಭಿನ್ನಾಬಿಪ್ರಾಯದ ಹೇಳಿಕೆಗಳು ಸರಿಯಲ್ಲ. ನೆಲ, ಜಲ ಭಾಷೆ, ರಾಷ್ಟ್ರೀಯತೆ ಬಂದಾಗ ಒಟ್ಟಾಗಿ ಎದುರಿಸಬೇಕು ಎಂದರು.
ಕುತಂತ್ರ ನಡೆಸುತ್ತಾರೆ:
ನಾವು ಹೋಗಿಲ್ಲ, ಅವರೂ ಬಂದಿಲ್ಲ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಕೆಲವೊಮ್ಮೆ ಪ್ರಶ್ನೆ ಕೇಳ್ತಾರೆ. ಇದರ ಬಗ್ಗೆ ತಿರುಚಿ ವರದಿಯಾಗುತ್ತೆ. ಸರ್ವಪಕ್ಷ ಸಭೆ ನಡೆಸಲಾಗಿದೆ. ಅಲ್ಲಿ ಕೆಲವು ನಾಯಕರು ಸಲಹೆ ನೀಡಿದ್ದಾರೆ. ಒಂದು ಕಡೆ ಕೋವಿಡ್, ಮತ್ತೊಂದೆಡೆ ಚೀನಾ ಕುತಂತ್ರ ನಡೆಸುತ್ತಿದೆ ಎಂದಿದ್ದಾರೆ.