ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಚಿಲುಮೆ ಸಂಸ್ಥೆಯ ಸಿಬ್ಬಂದಿ ಒಂದೇ ತಿಂಗಳಿನಲ್ಲಿ ದೊಡ್ಡ ಸಂಖ್ಯೆಯ ಮತದಾರರ ಹೆಸರನ್ನು ರದ್ದು ಮಾಡಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು ದೂರು ಕೇಳಿಬಂದಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡದೆ, ಕಡತಗಳನ್ನು ಒಂದು ಕೊಠಡಿಯಲ್ಲಿ ಇರಿಸಿಕೊಂಡು, ಆನ್‌ಲೈನ್‌ನಲ್ಲಿಯೇ ಹಲವರು ಹೆಸರುಗಳನ್ನು ಏಕಾಏಕಿ ರದ್ದು ಮಾಡಿ, ದಾಖಲೆ ಸಿಗದಂತೆ ಮರೆಮಾಚಿದ್ದರು ಎಂದು ಹೇಳಲಾಗುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲು ಬಿಬಿಎಂಪಿ ಅಧಿಕಾರಿಗಳು ಚಿಲುಮೆ ಸಂಸ್ಥೆಯಿಂದ ಲಕ್ಷಾಂತರ ರೂ ಹಣ ಪಡೆದಿರುವ ಆರೋಪವೂ ಇದೆ. ಹಣ ಪಾವತಿ ಮಾಡಿದ ಮೇಲೆಯೇ ಅಧಿಕಾರಿಗಳು ಅನುಮತಿ ನೀಡಿದ್ದರು ಎಂದು ಎನ್ನಲಾಗುತ್ತಿದೆ.
3 ತಿಂಗಳಲ್ಲಿ ಮತದಾರರ ಸಂಪೂರ್ಣ ಮಾಹಿತಿ ಸಂಗ್ರಹ:ಚಿಲುಮೆ ಸಂಸ್ಥೆ ಅನುಮತಿ ಪಡೆದು 3 ತಿಂಗಳಲ್ಲಿ ಮತದಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿತ್ತು. ಮಾಹಿತಿ ಸಂಗ್ರಹಿಸಲು ಹಲವು ಸಂಘ- ಸಂಸ್ಥೆಗಳಿಗೆ ಹಣ ಪಾವತಿ ಮಾಡಿದೆ. ಚಿಲುಮೆ ಸಂಸ್ಥೆಯು ಪಾಲಿಕೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ 5 ಸಾವಿರ ಸಿಬ್ಬಂದಿಯನ್ನು ಸರ್ವೇಗೆ ನೇಮಿಸಿತ್ತು ಎಂದು ತಿಳಿದು ಬಂದಿದೆ.
ಇಬ್ಬರ ಐಎಎಸ್ ಅಧಿಕಾರಿಗಳನ್ನು ವಿಚಾರಣೆ:ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಅಮಾನತಾಗಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ಸರ್ಕಾರ ಮುಂದಾಗಿದೆ.
ಕೇಂದ್ರ ಚು. ಆಯೋಗದಿಂದ ನಿರ್ದೇಶನ:ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಉಸ್ತುವರಿಯೂ ವಹಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತ ಎಸ್. ರಂಗಪ್ಪ ಅವರ ಅಮಾನತಿಗೆ ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.