ಬೆಂಗಳೂರು:ರಾಜಕೀಯ ವಲಯದಲ್ಲಿ ಟಾಕ್ವಾರ್ ಗೆ ಕಾರಣವಾಗಿರುವ ಚಿಲುಮೆ ಸಂಸ್ಥೆಯಿಂದ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ, ಈಗಾಗಲೇ ಮೂವರನ್ನು ಬಂಧಿಸಿದ್ದು, ಇದೀಗ ಮತ್ತೋರ್ವನನ್ನು ಹಲಸೂರುಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಲುಮೆ ಸಂಸ್ಥೆಯ ಆ್ಯಪ್ ಡೆವಲಪರ್ ಎಂದು ಹೇಳಲಾಗುತ್ತಿರುವ ಸಂಜೀವ್ ಶೆಟ್ಟಿಯನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ರವಿಕುಮಾರ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ.
ರವಿಕುಮಾರ್ ಸೂಚನೆ ಮೇರೆಗೆ ಸಂಜೀವ್ ಶೆಟ್ಟಿ ಆ್ಯಪ್ ಸಿದ್ಧಪಡಿಸಿದ್ದರು. ಯಾವ ಉದ್ದೇಶಕ್ಕೆ ಆ್ಯಪ್ ಸಿದ್ಧಪಡಿಸಲು ಹೇಳಿದ್ದರು? ಎಷ್ಟು ಆ್ಯಪ್ ಮಾಡಿಕೊಡಲಾಗಿದೆ? ಆ್ಯಪ್ ಮುಖಾಂತರ ಇದುವರೆಗೂ ಎಷ್ಟು ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿತ್ತು? ಎಂಬ ಹಲವು ತಾಂತ್ರಿಕ ವಿಚಾರಗಳ ಬಗ್ಗೆ ಸಂಜೀವ್ ಶೆಟ್ಟಿಯಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ನಾಪತ್ತೆಯಾಗಿರುವ ರವಿಕುಮಾರ್ ಕುಟುಂಬಸ್ಥರು ಹಾಗೂ ಸ್ನೇಹಿತರ ವಿಚಾರಣೆ ನಡೆಸಲಾಗುತ್ತಿದೆ. ರವಿಕುಮಾರ್ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಅವರಿಗೆ ಬಂದಿದ್ದ ಕೊನೆ ಕರೆಯ ಮಾಹಿತಿ ಆಧರಿಸಿ ಸಂಪರ್ಕಿತರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿರಾಗಿರುವ ಸಂಸ್ಥೆಯ ನಿರ್ದೇಶಕ ಕೆಂಪೇಗೌಡ ಮೂಲಕ ಹಣಕಾಸಿನ ವ್ಯವಹಾರದ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಬಂಧನ