ಬೆಂಗಳೂರು:ಚಿಲುಮೆ ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮಾಹಿತಿ ಕಳವು ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಚುನಾವಣೆ ಆಯೋಗಗಕ್ಕೆ ಬಿಬಿಎಂಪಿ ವರದಿ ಸಲ್ಲಿಕೆ ಮಾಡಿದೆ.
ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಡಳಿತ ಹಾಗೂ ಚುನಾವಣೆ ಶಾಖೆಯ ವಿಶೇಷ ಆಯುಕ್ತ ಎಸ್.ರಂಗಪ್ಪ, 2018ರ ಡಿಸೆಂಬರ್ 22ರಂದು ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಜಾಗೃತಿ ಹಾಗೂ ಆಧಾರ್ ಸಂಖ್ಯೆ ಲಿಂಕ್ ಮಾಡಲು ಷರತ್ತು ವಿಧಿಸಿ ಅನುಮತಿ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಬಿಎಲ್‌ಒ ಹಾಗೂ ಮತದಾರರ ನೋಂದಣಾಧಿಕಾರಿಗಳ ಸಹಯೋಗಕ್ಕೆ ಸೂಚಿಸಲಾಗಿತ್ತು. ಆದರೆ, ಸಂಸ್ಥೆಯು ಷರತ್ತು ಉಲ್ಲಂಘಿಸಿದ್ದರಿಂದ ಇದೇ ನವೆಂಬರ್ 2ರಂದು ಅನುಮತಿ ರದ್ದು ಪಡಿಸಿತ್ತು. ಆದರೂ, ಸಂಸ್ಥೆ ಹಾಗೂ ಲೊಕೇಶ್ ಅನುಮತಿಯಿಲ್ಲದೇ ಬಿಎಲ್‌ಒ ಹೆಸರಿನಲ್ಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಮನೆ ಮನೆಗೆ ತೆರಳಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ. ಮತದಾರರ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ:ಸಂಸ್ಥೆಯ ವಿರುದ್ಧ ಬಿಬಿಎಂಪಿ ನಡೆಸಿರುವ ತನಿಖೆ ವರದಿ ಸಿದ್ಧವಾಗಿದ್ದು, ಒಮ್ಮೆ ಬಿಬಿಎಂಪಿ ಮುಖ್ಯ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ರಾಜ್ಯ ಚುನಾವಣೆ ಆಯೋಗಗಕ್ಕೆ ವರದಿ ಸಲ್ಲಿಕೆ ಮಾಡಿದ್ದೇವೆ. ಇನ್ನುಮುಂದೆ ಬಿಬಿಎಂಪಿ ಅಧಿಕಾರಿಗಳೇ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಮತದಾರರ ಮಾಹಿತಿ ಕಳ್ಳತನ ಆರೋಪ: ಚಿಲುಮೆ ಸಂಸ್ಥೆಯ ಅನುಮತಿ ರದ್ದು ಮಾಡಿ ಎಫ್ಐಆರ್ ದಾಖಲಿಸಿದ ಬಿಬಿಎಂಪಿ