ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಗಾಂಜಾ ಮತ್ತಲ್ಲಿ ಪುಂಡರ ಗುಂಪೊಂದು ಆಟವಾಡಲು ತೆರಳಿದ ಪುಟಾಣಿಗಳನ್ನು ಮರಕ್ಕೆ ಕಟ್ಟಿಹಾಕಿ ಬೀಡಿ ಸೇಯುವಂತೆ ಒತ್ತಾಯಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಬಿ.ನಾರಾಯಣಪುರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಪುಂಡರ ವಿರುದ್ಧ ಮಹದೇವಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ದೇವಸಂದ್ರ ವಾರ್ಡ್ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಆಟವಾಡಲೆಂದು ಬಿ. ನಾರಾಯಣಪುರ ಮೈದಾನಕ್ಕೆ ತೆರಳಿದ್ದ ಮಕ್ಕಳಿಗೆ ಮತ್ತಲ್ಲಿ ತೇಲಾಡುತ್ತಿದ್ದ ಪುಂಡರ ಗುಂಪು ಅವರನ್ನು ಮರಕ್ಕೆ ಕಟ್ಟಿ ಹಾಕಿ, ಒಂದು ಗಂಟೆ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಮಕ್ಕಳನ್ನು ಸುತ್ತುವರೆದಿರುವ ಪುಂಡರ ಗುಂಪು ಒಂದಡೆ ಕೂರಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಕ್ಕಳು ಕಣ್ಣೀರು ಹಾಕಿದರೂ ನಿಲ್ಲಿಸದ ಕಿಡಿಗೇಡಿಗಳು ಮೊಬೈಲ್ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ದೇವಸಂದ್ರ ವಾರ್ಡ್ ಮಾಜಿ ಕಾರ್ಪೊರೇಟರ್ ಶ್ರೀಕಾಂತ್, ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಹಿಂದೆ ಸಹ ಮೂರು ಬಾರಿ ನಡೆದಿದೆ. ನಾವು ಪೊಲೀಸರಿಗೆ ಹೇಳಿದ್ರೂ ಸಹ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನ್ನ ಬಳಿ ಮಕ್ಕಳ ಪೋಷಕರು ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಪೋಷಕರಿಗೆ ಹೇಳಿದ್ದೇನೆ ಎಂದರು.