ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮಕ್ಕಳು ನಾಪತ್ತೆ ಪ್ರಕರಣ: ಮೂವರು ಮಕ್ಕಳ ಪತ್ತೆ, ಉಳಿದವರಿಗೆ ಶೋಧ - Bagalgunte children missing

ಓದಿನಲ್ಲಿ ಆಸಕ್ತಿಯಿಲ್ಲ ಎಂದು ಪತ್ರ ಬರೆದು ಮನೆಬಿಟ್ಟು ಹೋಗಿದ್ದ ಮೂವರು ಮಕ್ಕಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದಾರೆ. ಆದರೆ ಮಂಗಳೂರಿಗೆ ತೆರಳಲು ಹಣವಿಲ್ಲದೆ ಮೈಸೂರಿಗೆ ತೆರಳಿದ್ದು, ಬಳಿಕ ಅಲ್ಲಿಂದ ವಾಪಸಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Children missing case: Three out of 7 found in City
ಬಾಗಲಗುಂಟೆಯ ಮೂವರು ಮಕ್ಕಳು ಪತ್ತೆ..ಉಳಿದವರಿಗೆ ಶೋಧ

By

Published : Oct 11, 2021, 1:42 PM IST

ಬೆಂಗಳೂರು: ನಗರದ ಬಾಗಲಗುಂಟೆಯ ಮೂವರು ಮಕ್ಕಳು ನಾಪತ್ತೆ ಪ್ರಕರಣ ಸುಖಾಂತ್ಯವಾಗಿದ್ದು, ಮೂವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಶುಕ್ರವಾರ ಸಂಜೆ ಮನೆಬಿಟ್ಟು ತೆರಳಿದ್ದ ಮೂವರು ಮೊದಲು ಮಂಗಳೂರಿಗೆ‌ ಹೋಗಿ ಅಲ್ಲಿ‌‌ ಸ್ಪೋರ್ಟ್ಸ್ ಕಲಿಕೆಯ ಬಗ್ಗೆ ಯೋಜಿಸಿದ್ದರು. ಶನಿವಾರ ಬೆಳಗಿನ ಜಾವ 5.30ಕ್ಕೆ ಜಾಗಿಂಗ್ ಮುಗಿಸಿ ಅಲ್ಲಿಂದ ಪರಾರಿಯಾಗಿದ್ದರು. ಮಂಗಳೂರಿಗೆ ಹೋಗಲು ಹಣವಿಲ್ಲದಿದ್ದಕ್ಕೆ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಇಬ್ಬರ ಬಳಿ 800 ರೂ. ಹಣವಿತ್ತು, ಇನ್ನೊಬ್ಬನ ಬಳಿ 200 ರೂ. ಹಣವಿತ್ತು. ಹೀಗಾಗಿ ಬಾಗಲಗುಂಟೆಯಿಂದ ಕೆಂಗೇರಿಗೆ ಸಾರಿಗೆ ಬಸ್​ನಲ್ಲಿ ಕೆಂಗೇರಿಯಿಂದ ಬಳಿಕ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಶನಿವಾರ ತಡರಾತ್ರಿವರೆಗೂ ಮೈಸೂರಿನಲ್ಲಿ ಸುತ್ತಾಡಿ ರಾತ್ರಿ 12.30ಕ್ಕೆ ಮತ್ತೆ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಸಿಸಿಟಿವಿ ದೃಶ್ಯ

ರಾತ್ರಿ ರೈಲ್ವೆ ನಿಲ್ದಾಣದಲ್ಲಿದ್ದ ಮಕ್ಕಳು ರವಿವಾರ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಓಡಾಡಿದ್ದಾರೆ. ನಂತರ ಅದೇ ದಿನ ರಾತ್ರಿಯಿಡೀ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೇ ತಂಗಿದ್ದಾರೆ. ಮೂವರು ಮತ್ತೆ ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂಗೆ ಹೋಗಿದ್ದಾರೆ. ಅಲ್ಲಿಂದ ಆನಂದ್ ರಾವ್ ಸರ್ಕಲ್ ಬಳಿ ಬಂದು ಪೇಪರ್ ಹಾಕುವವನ ಬಳಿ ಕೆಲಸ ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ:

ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು‌ ಪತ್ರ ಬರೆದು ಯುವತಿ ಸೇರಿ‌ ಏಳು ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ‌ ಹಾಗೂ‌‌ ಸೋಲದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ‌‌ ದಾಖಲಾಗಿತ್ತು.

ಶುಕ್ರವಾರ ಬೆಳಗ್ಗೆ ವಾಕಿಂಗ್‌ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಮಕ್ಳಳು ಮನೆಗೆ ಬರದೇ ನಾಪತ್ತೆಯಾಗಿದ್ದಾರೆ ಎಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. 15 ವರ್ಷದ ಕಿರಣ್, ಪರಿಕ್ಷೀತ್ ಹಾಗೂ ನಂದನ್ ಎಂಬುವರು ಕಾಣೆಯಾಗಿರುವ ಮಕ್ಕಳು.

ಶೇಷಾದ್ರಿ ಲೇಔಟ್‌ನಲ್ಲಿರುವ ನಿವಾಸಿಯಾಗಿರುವ‌ ಮಕ್ಕಳು ಸೌಂದರ್ಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಮನೆ ಬಿಡುವುದಕ್ಕೂ ಮುನ್ನ ಪತ್ರ ಬರೆದಿರುವ ಮಕ್ಕಳು, ತಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲಿ ಆಸಕ್ತಿ ಇದೆ, ಕ್ರೀಡೆಯಲ್ಲೇ ಸಾಧನೆ ಮಾಡಿ ವಾಪಸ್ ಬರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಮೂವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.

ಸೋದನಹಳ್ಳಿಯ ಮಕ್ಕಳೂ ನಾಪತ್ತೆ:

ಸೋಲದೇವನಹಳ್ಳಿಯ ಎಜಿಬಿ ಲೇಔಟ್‌ನಲ್ಲಿರುವ ಕ್ರಿಸ್ಟಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಓರ್ವ ಯುವತಿ ಹಾಗೂ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ರಾಯನ್ ಸಿದ್ಧಾಂತ (12), ಅಮೃತವರ್ಷಿಣಿ (21) ಭೂಮಿ (12) ಹಾಗೂ ಚಿಂತನ್ (12) ನಾಪತ್ತೆಯಾದ ಮಕ್ಕಳು.

ಎಲ್ಲರೂ ಒಂದೇ ರೀತಿ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಕ್ರೀಡೆಗೆ ಸಂಬಂಧಿಸಿದ ವಸ್ತುಗಳ ಜೊತೆಗೆ ಸ್ಲಿಪರ್, ಬ್ರಶ್, ಟೂತ್‌ಪೇಸ್ಟ್, ವಾಟರ್ ಬಾಟಲ್ ಹಾಗು ಹಣವನ್ನೂ ತೆಗೆದುಕೊಂಡು ಹೋಗಿದ್ದಾರೆ. ನಾಪತ್ತೆಯಾದ ಮಕ್ಕಳ ಪೋಷಕರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details