ಕರ್ನಾಟಕ

karnataka

ETV Bharat / state

ಮಕ್ಕಳು ಜಾಗತಿಕವಾಗಿ ಯೋಚನೆ ಮಾಡುವುದನ್ನು ಕಲಿಯಬೇಕು: ಡಿಸಿಎಂ ಡಿಕೆಶಿ - ಬಾಬಾ ಸಾಹೇಬ್‌ ಅಂಬೇಡ್ಕರ್‌

ಬೆಂಗಳೂರಿನ ಗಾಂಧಿ ಭವನದಲ್ಲಿ ಜವಾಹರ್ ಬಾಲ್ ಮಂಚ್​ದಿಂದ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್‌ ಭಾಗವಹಿಸಿದ್ದರು.

DCM DK Shivakumar inaugurated the programme.
ಡಿಸಿಎಂ ಡಿ ಕೆ ಶಿವಕುಮಾರ್ ಕಾಯಕ್ರಮವನ್ನು ಉದ್ಘಾಟಿಸಿದರು.

By ETV Bharat Karnataka Team

Published : Nov 14, 2023, 10:50 PM IST

ಬೆಂಗಳೂರು:ಪ್ರಸ್ತುತ ಕಾಲದಲ್ಲಿ ಸ್ಪರ್ಧೆ ಕೇವಲ ಶಾಲಾಮಟ್ಟದಲ್ಲಿ ಇಲ್ಲ, ಜಾಗತಿಕಮಟ್ಟದಲ್ಲಿದೆ. ಮಕ್ಕಳು ಜಾಗತಿಕವಾಗಿ ಯೋಚನೆ ಮಾಡಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಸಲಹೆ ನೀಡಿದರು. ನಗರದ ಗಾಂಧಿ ಭವನದಲ್ಲಿ ಜವಾಹರ್ ಬಾಲ್ ಮಂಚ್​ದಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ದೇಶ, ಪ್ರಪಂಚ ವಿಶಾಲವಾಗಿದೆ, ಜ್ಞಾನವೂ ಹೆಚ್ಚು ವಿಸ್ತಾರಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಮಕ್ಕಳು ಸಹ ಜ್ಞಾನದಾಹಿಗಳಾಗಬೇಕು, ಈಗಿನ ಶಿಕ್ಷಕರು ಮಕ್ಕಳಿಗಿಂತ ಹೆಚ್ಚು ಕಲಿಯಬೇಕಾಗಿದೆ ಎಂದರು.

ಇಡೀ ಪ್ರಪಂಚದಲ್ಲಿ ಅದೃಷ್ಟವಂತರು ಎಂದರೆ ಮಕ್ಕಳು. ಏಕೆಂದರೆ ಅವರ ಪೋಷಕರು ಕಷ್ಟಪಟ್ಟಂತೆ ಮಕ್ಕಳು ಪಡಬಾರದು ಎಂದು ಎಲ್ಲ ರೀತಿಯ ಸೌಕರ್ಯ ಮಾಡಿಕೊಡುತ್ತಾರೆ, ಅವರ ಕಷ್ಟಗಳಿಗೆ ಸ್ಪಂದಿಸಿ ಸಾಧನೆ ಮಾಡಿ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ಎಲ್ಲ ಕೆಲಸಗಳು, ಸ್ಪರ್ಧೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಶಾಲೆಯ ಬ್ಯಾಂಡ್‌ ತಂಡದಲ್ಲಿ ಬೇಸ್‌ ಡ್ರಮ್‌ ಬಾರಿಸುತ್ತಿದ್ದೆನು. ನಾನು ಮತ್ತು ನನ್ನ ಗೆಳೆಯನೊಬ್ಬ ಚಾಮರಾಜಪೇಟೆಯ ನೃತ್ಯಕಲಾ ನಿಕೇತನ ಎನ್ನುವ ಶಾಲೆಗೆ ಭರತನಾಟ್ಯ ಕಲಿಯಲು ಸೇರಿದ್ದೆವು. ಸಮಯದ ಅಭಾವದ ಕಾರಣ ಕೇವಲ 6- 7 ತಿಂಗಳು ಮಾತ್ರ ಕಲಿಯಲು ಸಾಧ್ಯವಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

6 ನೇ ತರಗತಿಯಲ್ಲಿ ಇದ್ದಾಗ ಮೊದಲ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ರೈತ ಮೊದಲಾ - ಸೈನಿಕ ಮೊದಲೇ ಎನ್ನುವುದು ವಿಷಯವಾಗಿತ್ತು. ಇದರಲ್ಲಿ ಮೊದಲ ಬಹುಮಾನ ಪಡೆದೆ. ಹೀಗೆ ಮಕ್ಕಳು ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಸಾಧನೆಗೆ ಬಡವ - ಶ್ರೀಮಂತ ಎನ್ನುವ ಭೇದವಿಲ್ಲ. ಸಲ್ಲದ ವಿಷಯಗಳಿಗೆ ಮಕ್ಕಳು ತಲೆ ಕೆಡಿಸಿಕೊಳ್ಳಬಾರದು, ಎಂತಹ ಬಡವನ ಮಗನೂ ಸಾಧನೆಯ ಶಿಖರ ಏರಬಹುದು. ಒಂದೇ ನೆಗೆತಕ್ಕೆ ಆಕಾಶ ಮುಟ್ಟುತ್ತೇನೆ ಎಂದು ಹಾರಬಾರದು. ಅದರ ಬಗ್ಗೆ ಕನಸು ಕಟ್ಟಿಕೊಂಡು, ಶ್ರಮಪಟ್ಟು, ಶಿಸ್ತಿನಿಂದ ಬೆಳೆಯಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.

ಬೇರುಗಳನ್ನು ಮರೆತರೇ ದಾರಿಯನ್ನು ಮರೆತಂತೆ, ಸ್ಪರ್ಧೆಯ ಮುಖಾಂತರ ನಿಮ್ಮ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಜವಾಹಾರ್ ಬಾಲ್ ಮಂಚ್ ಮಾಡುತ್ತಿದೆ. ನಮ್ಮ ಕಾಲದಲ್ಲಿ ಒಬ್ಬ ಮಂತ್ರಿಯ ಬಳಿ ಪ್ರಶಸ್ತಿ ತೆಗೆದುಕೊಳ್ಳುವ ಅದೃಷ್ಟ ನಮಗಿರಲಿಲ್ಲ. ಇಂದು ನೀವು ಉಪಮುಖ್ಯಮಂತ್ರಿಯ ಬಳಿ ಪ್ರಶಸ್ತಿ ಪಡೆದುಕೊಂಡಿರುವುದು ಸಾಧನೆ, ಹೀಗೆಂದ ಮಾತ್ರಕ್ಕೆ ಡಿ ಕೆ ಶಿವಕುಮಾರ್ ದೊಡ್ಡ ವ್ಯಕ್ತಿಯಲ್ಲ, ಬದಲಾಗಿ ಜನರು ನೀಡಿದ ಹುದ್ದೆ ದೊಡ್ಡದು ಎಂದು ಹೇಳಿದರು.

ಈ ದೇಶಕ್ಕೆ ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಅಂಬೇಡ್ಕರ್‌, ನೆಹರು ಅವರಂತಹ ಲಕ್ಷಾಂತರ ಮಾಹಾನ್ ಪುರಷರ ತ್ಯಾಗದಿಂದ ಸ್ವಾತಂತ್ರ್ಯ ದೊರಕಿದೆ. ಪ್ರಜಾಪ್ರಭುತ್ವ ಅನುಭವಿಸುತ್ತಿದ್ದೇವೆ, ಅದನ್ನು ಕಾಪಾಡುವ ಕೆಲಸ ಮಾಡಬೇಕು. ಈ ದೇಶದ ಭದ್ರ ಬುನಾದಿಯಾದ ಸಂವಿಧಾನದ ಬಗ್ಗೆ ಮಕ್ಕಳು ಹೆಚ್ಚು ತಿಳಿದುಕೊಳ್ಳಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಬಾಲ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ಡಾ ಗಿರಿ, ಡಾ ಹರಿ, ಸಮನ್ವಯಕಾರ ಹಸನ್ ಅಮನ್ , ಮಹಾರಾಷ್ಟ್ರ ಸಮನ್ವಯಕಾರ ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂಓದಿ:ನಮ್ಮ ಸರ್ಕಾರದ ಯೋಜನೆಗಳು ದೇಶಕ್ಕೆ ಮಾದರಿ ಆಗಿವೆ: ಡಿಸಿಎಂ ಡಿ ಕೆ ಶಿವಕುಮಾರ್

ABOUT THE AUTHOR

...view details