ಬೆಂಗಳೂರು:ಹಲ್ಲುಗಳಿಂದ ವಾಸನೆ ಬರುತ್ತಿದೆ ಎಂಬ ಕಾರಣವೊಡ್ಡಿ ಮಕ್ಕಳಿಬ್ಬರು ಸೇರಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರ ಹಾಕಿದ ವಿಚಿತ್ರ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಶೀಲಾ (50) ಮಕ್ಕಳ ಪ್ರೀತಿ ಸಿಗದೇ ಬೀದಿಗೆ ಬಂದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಮಕ್ಕಳಿಬ್ಬರು ಹಲ್ಲುಗಳಿಂದ ವಾಸನೆ ಬರುತ್ತಿದೆ ಎಂದು ಹೆತ್ತ ತಾಯಿಯನ್ನೇ ಮನೆಯಿಂದ ಹೊರಹಾಕುವ ಮೂಲಕ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗುತ್ತಿದೆ.
ಹಲ್ಲು ನೋವಿನಿಂದ ಬಳಲುತ್ತಿದ್ದ ಶೀಲಾ, ಇತ್ತೀಚೆಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆದ್ರೆ, ವೈದ್ಯರ ನಿರ್ಲಕ್ಷ್ಯದಿಂದ ಹಲ್ಲಿನ ಎಲುಬುನ್ನು ತುಂಡು ಮಾಡಲಾಗಿತ್ತಂತೆ. ಇದರಿಂದ ಹಲ್ಲುಗಳ ವಾಸನೆ ಹೆಚ್ಚಾಗಿ ಬರಲಾಂಭಿಸಿತ್ತು. ಈ ವಾಸನೆಯನ್ನು ತಡೆದುಕೊಳ್ಳಲಾಗದ ಮಕ್ಕಳು, ಶೀಲಾ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮನೆಯಿಂದ ಹೊರಬಂದ ಶೀಲಾ, ದೇವಸ್ಥಾನವೊಂದರಲ್ಲಿ ಕೆಲಸ ಮಾಡುತ್ತಾ ಕೇವಲ 50 ರೂ.ನಲ್ಲಿ ತನ್ನ ಜೀವನ ನಡೆಸುತ್ತಿದ್ದು ಮಕ್ಕಳು ಮಾತ್ರ ಈ ಹೆತ್ತ ತಾಯಿಯ ಸಂಕಟ ನೋಡಿಯೂ ನೋಡದಂತೆ ತಿರುಗಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.