ಬೆಂಗಳೂರು: ಹೋಮ್ ವರ್ಕ್ ಮಾಡಿಲ್ಲ ಎಂದು ಪೋಷಕರು ಹೊಡೆದು ಬುದ್ಧಿ ಹೇಳಿದ್ದಕ್ಕೆ ಕೋಪಿಸಿಕೊಂಡ ಬಾಲಕ, ಬಸ್ ಹತ್ತಿ ಮನೆ ತೊರೆದ ಘಟನೆ ನಗರದ ಕಾಟನ್ ಪೇಟೆ ಏರಿಯಾದಲ್ಲಿ ನಡೆದಿದೆ.
ಬಸ್ನಲ್ಲಿ ಟಿಕೆಟ್‌ಗೆ ಹಣ ನೀಡುವಂತೆ ಕೇಳಿದಾಗ ಬಾಲಕ ಜೋರಾಗಿ ಅತ್ತಿದ್ದು, ಇದನ್ನು ಕಂಡ ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಬಾಲಕನನ್ನು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಮಕ್ಕಳಾ ಸಹಾಯವಾಣಿಗೆ ಕರೆ ತಂದು ಬುದ್ಧಿ ಹೇಳಿ ಮತ್ತೆ ಪೋಷಕರಿಗೆ ಒಪ್ಪಿಸಿದ್ದಾರೆ. ಕಾಟನ್ ಪೇಟೆ ಏರಿಯಾದಲ್ಲಿ ವಾಸವಾಗಿದ್ದ 11 ವರ್ಷದ ಮಂಜುನಾಥ್ (ಹೆಸರು ಬದಲಿಸಲಾಗಿದೆ) ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಹೋಮ್ ವರ್ಕ್ ಮಾಡಿಲ್ಲ ಎಂದು ಬಾಲಕನ ತಾಯಿ ಸಿಟ್ಟಿನಿಂದ ಮಗನಿಗೆ ಹೊಡೆದಿದ್ದಾರೆ. ಇಷ್ಟಕ್ಕೆ ಅಸಮಾಧಾನಗೊಂಡು ಕಳೆದ 13ರಂದು ಶಾಲೆಗೆ ಹೋಗುವುದಾಗಿ ಹೇಳಿ ಸಮವಸ್ತ್ರ ಧರಿಸಿ ಸಿಟಿ ಮಾರ್ಕೆಟ್ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ಹೊಸಕೋಟೆ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದಾನೆ. ಬಸ್ ಕಬ್ಬನ್ ಪಾರ್ಕ್ ಬಳಿ ಬರುತ್ತಿದ್ದಂತೆ ಮಹಿಳಾ ಕಂಡಕ್ಟರ್ ಬಾಲಕನನ್ನು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದಕ್ಕೆ ಒಂದೇ ಸಮನೆ ಅತ್ತಿದ್ದಾನೆ.
ಬಾಲಕನ ಪೋಷಕರು ಇಲ್ಲದಿರುವುದನ್ನು ಗಮನಿಸಿದ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವನಿತಾ ಸಹಾಯವಾಣಿ ಕೇಂದ್ರದ ಮಹಿಳಾ ಹೋಮ್ ಗಾರ್ಡ್ ಮೀನಾ ಎಂಬುವರು ಬಾಲಕನ ಪೂರ್ವಾಪರ ಪ್ರಶ್ನಿಸಿ, ಆತನನ್ನು ಸಮಾಧಾನಪಡಿಸಿ ತಂದೆಯ ಮೊಬೈಲ್ ನಂಬರ್ ಪಡೆದಿದ್ದಾರೆ. ಮಗ ಮನೆ ತೊರೆದಿರುವ ವಿಚಾರ ತಿಳಿಸಿ ಕಮೀಷನರ್ ಕಚೇರಿಗೆ ಬರುವಂತೆ ತಿಳಿಸಿದ್ದಾರೆ.
ತಂದೆ-ತಾಯಿ ವಿರುದ್ಧವೇ ದೂರು ನೀಡಿದ ಪೋರ ವನಿತಾ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ರಾಣಿ ಶೆಟ್ಟಿ ಪ್ರಶ್ನಿಸುತ್ತಿದ್ದಂತೆ ತಾಯಿ ವಿರುದ್ಧ ಎರಡು ಪುಟಗಳಲ್ಲಿ ದೂರು ಬರೆದು ನೀಡಿದ್ದಾನೆ. ನಮ್ಮಮ್ಮ ಯಾವಾಗಲೂ ಬೇರೆಯವರನ್ನು ಹೋಲಿಸಿ ನನ್ನನ್ನೂ ಬೈಯುತ್ತಾರೆ. ನನ್ನ ಅಕ್ಕನಿಗೆ ಡೊಡ್ಡ-ದೊಡ್ಡ ಅಂಗಡಿಗಳಲ್ಲಿ ಬಟ್ಟೆ ಕೊಡಿಸುತ್ತಾರೆ. ನನಗೆ ಮಾತ್ರ ಪುಟ್ ಪಾತ್ನಲ್ಲಿ ಬಟ್ಟೆ ಕೊಡಿಸುತ್ತಾರೆ. ನಮ್ಮಮ್ಮ ಸರಿಯಿಲ್ಲ. ನಾನು ಮತ್ತೆ ಮನೆಗೆ ಹೋಗೋದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಬಳಿಕ ವನಿತಾ ಸಹಾಯವಾಣಿ ಕೇಂದ್ರಕ್ಕೆ ಆಗಮಿಸಿದ ಬಾಲಕನ ಪೋಷಕರಿಗೆ ಕೌನ್ಸಿಲಿಂಗ್ ಮಾಡಿ ಮಗನೊಂದಿಗೆ ಪ್ರೀತಿಯಿಂದ ವರ್ತಿಸುವಂತೆ ಬುದ್ಧಿವಾದ ಹೇಳಿ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಣಿ ಸತೀಶ್, "ಪೋಷಕರು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಈ ರೀತಿ ತಾರತಮ್ಯ ಮಾಡಿದ್ರೆ ಮಕ್ಕಳು ಕುಟುಂಬದಿಂದ ದೂರ ಸರಿಯುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳ ಮೇಲೆ ಪೋಷಕರು ಯಾವುದೇ ರೀತಿ ಒತ್ತಡ ಹಾಗೂ ಬಲವಂತ ಮಾಡಿದ್ರೆ, ಮಕ್ಕಳು ದಾರಿ ತಪ್ಪುತ್ತಾರೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.