ಬೆಂಗಳೂರು : ನಗರದಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ದೂಡುತ್ತಿರುವ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ದಂಧೆಯ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನೀಡಿರುವ ವರದಿ ಕುರಿತು ಪ್ರತಿಕ್ರಿಯಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ನಗರದ ರಸ್ತೆಗಳಲ್ಲಿ ವ್ಯಾಪಾರ ಮಾಡಲು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ವಿಚಾರವಾಗಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದಿಸಿ, ನಗರದಲ್ಲಿ ರಸ್ತೆ ಬದಿ ಆಟಿಕೆ, ಹೂ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳ ಬಗ್ಗೆ ಕಾನೂನು ಸೇವೆಗಳ ಪ್ರಾಧಿಕಾರ ಸರ್ವೇ ನಡೆಸಿ ವರದಿ ಸಲ್ಲಿಸಿದೆ. ಮಕ್ಕಳನ್ನು ಕಳ್ಳ ಸಾಗಣಿಕೆಗೆ ತಳ್ಳುತ್ತಿರುವ ಆಘಾತಕಾರಿ ವಿಷಯ ವರದಿಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲೆ ಮೈತ್ರೇಯಿ ಕೃಷ್ಣನ್ ವಾದಿಸಿ, ಪ್ರಾಧಿಕಾರವು 2021ರ ಜುಲೈ 12 ರಂದು ವರದಿ ಸಲ್ಲಿಸಿದೆ. ಈ ವರದಿಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕಿದೆ ಎಂದು ತಿಳಿಸಿದರು.
ಸರ್ಕಾರದ ಪರ ವಕೀಲರು ವಾದಿಸಿ, ಶಿಕ್ಷಣ ಇಲಾಖೆಯ ಉದ್ಯೋಗಿಯು ಮಕ್ಕಳ ಕಳ್ಳಸಾಗಣೆ ತೊಡಗಿದ ಪ್ರಕರಣದ ತನಿಖೆಯನ್ನು ಚಾಮರಾಪೇಟೆ ಠಾಣೆ ಪೊಲೀಸರು ಪೂರ್ಣಗೊಳಿಸಿ ಸಲ್ಲಿಸಿರುವ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಶಿಕ್ಷಣ ಇಲಾಖೆಯಿಂದ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ದೊರೆತ ನಂತರ ಮುಂದಿನ ಕ್ರಮ ಜರುಗಿಸಲಾಗುವುದು. ಈ ಮಾಹಿತಿ ಸಲ್ಲಿಸಲು 3 ವಾರ ಕಾಲಾವಕಾಶ ನೀಡಬೇಕೆಂದು ಕೋರಿದರು.
ವಾದ - ಪ್ರತಿವಾದ ಆಲಿಸಿದ ಪೀಠ, ಚಾಮರಾಜಪೇಟೆ ಠಾಣಾ ಪೊಲೀಸರ ತನಿಖಾ ವರದಿಯನ್ನು ಅರ್ಜಿದಾರರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರಿಗೆ ಒದಗಿಸಬೇಕು. ಅವರು ವರದಿಯನ್ನು ಪರಿಶೀಲಿಸಿ ಅಭಿಪ್ರಾಯ ತಿಳಿಸಬಹುದು. ಇನ್ನೂ ಪ್ರಾಧಿಕಾರದ ವರದಿಗೆ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.