ಬೆಂಗಳೂರು:ವಯಸ್ಕರಿಗೆಲ್ಲ ವ್ಯಾಕ್ಸಿನ್ ವಿತರಣೆ ಆಗಿರುವುದರಿಂದ ಕೋವಿಡ್(COVID) 3ನೇ ಅಲೆಯಲ್ಲಿ ಮಕ್ಕಳೇ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ. ಇದಕ್ಕೆ ನಿದರ್ಶನವೆಂಬಂತೆ ಕಳೆದ ಹತ್ತು ದಿನದಲ್ಲಿ ಬೆಂಗಳೂರಿನಲ್ಲೇ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ನಗರದಲ್ಲಿ ವೈರಸ್ ಕಡಿಮೆ ಆಗ್ತಿದ್ರೂ, ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ ಆಗ್ತಿರೋದು ಆತಂಕ ಹುಟ್ಟಿಸಿದೆ.
ಆರೋಗ್ಯ ವಿಶೇಷ ಆಯುಕ್ತ ರಂದೀಪ್ ಜುಲೈ 7 ರಿಂದ ಜುಲೈ 16ರ ವರೆಗೆ 10 ದಿನಗಳ ಅವಧಿಯಲ್ಲಿ ನಗರದಲ್ಲಿ 641 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 285 ಹೆಣ್ಣು ಮಕ್ಕಳು, 366 ಗಂಡು ಮಕ್ಕಳಿಗೆ ಸೋಂಕು ಹರಡಿದೆ. 19 ವರ್ಷದೊಳಗಿನ 641 ಮಕ್ಕಳಲ್ಲಿ, ಈ ಪೈಕಿ ನವಜಾತ ಶಿಶುವಿನಿಂದ ಹಿಡಿದು 9 ವರ್ಷದ 219 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ.
ನಗರದಲ್ಲಿ ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆ 5,662 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಪೈಕಿ ಶೇಕಡಾ 8ರಷ್ಟು ಮಂದಿ ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ.
ಮೂರನೇ ಅಲೆಯ ನಿಯಂತ್ರಣಕ್ಕೆ ಬಿಬಿಎಂಪಿ ರಚಿಸಿರುವ ತಜ್ಞರ ತಂಡದೊಂದಿಗೆ ಮೊದಲ ಸಭೆ ನಡೆಸಲಾಗಿದೆ. ಈ ಕುರಿತು ಮಾತನಾಡಿದ ಆರೋಗ್ಯ ವಿಶೇಷ ಆಯುಕ್ತರಾದ ರಂದೀಪ್, ಎಂಬಿಬಿಎಸ್ ವೈದ್ಯರಿಗೂ ಪಿಡಿಯಾಟ್ರಿಷನ್ ಕುರಿತ ತರಬೇತಿ ನೀಡಬೇಕು. ಮಕ್ಕಳ ಐಸಿಯು ಬೆಡ್, ಸಿಬ್ಬಂದಿ ಹೆಚ್ಚಳ ಮಾಡಬೇಕು. ಈಗಾಗಲೇ ಕೋವಿಡ್ ಕ್ಲಸ್ಟರ್ ಕೇಸ್, ಜನ ಜಾಸ್ತಿ ಇರುವ ಕಡೆ ಹೆಚ್ಚು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ತಜ್ಞರ ತಂಡ ಸಲಹೆ ನೀಡಿದೆ. ಕೋವಿಡ್ ಹರಡುವ ಪ್ರಮಾಣ ಜಾಸ್ತಿ ಇದ್ದರೆ, ಕಂಟೈನ್ಮೆಂಟ್ ಜೋನ್ ನಿಯಮ ಬಿಗಿಗೊಳಿಸಲು ಸಮಿತಿ ಸೂಚಿಸಿದೆ ಎಂದು ಮಾಹಿತಿ ನೀಡಿದ್ರು.
ಓದಿ:ಯಡಿಯೂರಪ್ಪ ಅವರ ನಾಲಿಗೆ- ಕೈ ಮಗನ ಕೈಯಲ್ಲಿದೆ : ವಿಶ್ವನಾಥ್ ವಾಗ್ದಾಳಿ