ಬೆಂಗಳೂರು:ಸಾಮೂಹಿಕ ವಿವಾಹ ನೆರವೇರಿಸುವ ವೇಳೆ ಓರ್ವ ವಧುವಿನ ವಯಸ್ಸು ಪರಿಶೀಲಿಸದೆ ಬಾಲ್ಯ ವಿವಾಹ ನಡೆಸಿದ ಪ್ರಕರಣದಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ದೇವಸ್ಥಾನದ ಮುಖ್ಯಸ್ಥರು ಹಾಗೂ ಸಿಬ್ಬಂದಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೊರಿ ಕೊಪ್ಪಳದ ಜಡಿಲಿಂಗೇಶ್ವರ ದೇವಸ್ಥಾನದ ಆಡಳಿತಗಾರರು ಮತ್ತು ಸಿಬ್ಬಂದಿಯಾದ ನಾಗರಾಜ, ಗಿಡ್ಡಪ್ಪ, ಹಣಮಪ್ಪ, ಮಂಜಪ್ಪ ಹಾಗೂ ನಾಗರಾಜ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗೆಯೇ ಪ್ರಕರಣದ 1ರಿಂದ 5ನೇ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಹೀಗಾಗಿ 6ರಿಂದ 10ನೇ ಆರೋಪಿಗಳಾಗಿರುವ ದೇವಸ್ಥಾನದ ಸಿಬ್ಬಂದಿಗೆ ಜಾಮೀನು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟು ಐವರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳು ಮುಂದಿನ 15 ದಿನಗಳಲ್ಲಿ ಪ್ರಕರಣದ ತನಿಖಾಧಿಕಾರಿ ಎದುರು ಹಾಜರಾಗಬೇಕು. ತಲಾ 2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಅಷ್ಟೇ ಮೊತ್ತಕ್ಕೆ ತನಿಖಾಧಿಕಾರಿ ಒಪ್ಪುವಂತಹ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ನೀಡಬೇಕು. ಆರೋಪಿಗಳು ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು. ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಸಾಕ್ಷ್ಯ ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ: ಕೊಪ್ಪಳದ ಹಾಲವರ್ತಿ ಗ್ರಾಮದ ಜಡಿಲಿಂಗೇಶ್ವರ ದೇವಸ್ಥಾನದಲ್ಲಿ 2020ರ ಫೆ. 28ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿತ್ತು. ಈ ಸಾಮೂಹಿಕ ವಿವಾಹದಲ್ಲಿ ಹಿರೇಹೊಳಿ ಗ್ರಾಮದ ಸಿದ್ರಾಮಪ್ಪ ಹಾಗೂ ಯಲಮಗೇರಿಯ ಶಾಂತವ್ವ ಕೂಡ ಸತಿ-ಪತಿಗಳಾಗಿದ್ದರು. 5 ತಿಂಗಂಳ ಬಳಿಕ 2020ರ ಜು. 28ರಂದು ಹಾಲವರ್ತಿ ಗ್ರಾಪಂ ಪಿಡಿಒ ಮಹೇಶ್ ಸಜ್ಜನ್ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮದುವೆ ನಡೆದ ದಿನ ಶಾಂತವ್ವಗೆ 17.8 ವರ್ಷ ವಯಸ್ಸಾಗಿದ್ದು, ಬಾಲ್ಯ ವಿವಾಹ ನೆರವೇರಿಸಲಾಗಿದೆ ಎಂದು ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ವರ ಸಿದ್ರಾಮಪ್ಪ, ವರನ ತಂದೆ, ತಾಯಿ, ವಧುವಿನ ತಂದೆ, ತಾಯಿ, ದೇವಸ್ಥಾನದ ಮುಖ್ಯಸ್ಥರು ಮತ್ತು ಸಿಬ್ಬಂದಿ ಸೇರಿ ಒಟ್ಟು ಹತ್ತು ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಸೆಕ್ಷನ್ 9, 10, 11 ಹಾಗೂ ಐಪಿಸಿ ಸೆಕ್ಷನ್ 201, 466 ಅಡಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ದೇವಸ್ಥಾನದ ಮುಖ್ಯಸ್ಥರು ಹಾಗೂ ಸಿಬ್ಬಂದಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಐಪಿಸಿ ಸೆಕ್ಷನ್ 466 ಹಾಗೂ 201ಅನ್ನು ಅನಗತ್ಯವಾಗಿ ಸೇರಿಸಲಾಗಿದೆ. ಪ್ರಕರಣದ ಮೊದಲನೇ ಆರೋಪಿಯಾದ ಮದುವೆ ಗಂಡು ಹಾಗೂ ಆತನ ಆಪ್ತ ಬಂಧುಗಳಿಗೆ ಸೆಷನ್ಸ್ ಕೋರ್ಟ್ನಿಂದ ಈಗಾಗಲೇ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅರ್ಜಿದಾರರು ಪ್ರಕರಣದಲ್ಲಿ 6ರಿಂದ 10ರವರೆಗಿನ ಆರೋಪಿಗಳಾಗಿದ್ದು, ಇವರನ್ನು ಬಂಧನಕ್ಕೆ ಒಳಪಡಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಹೀಗಾಗಿ ಅರ್ಜಿದಾರರಾದ ದೇವಸ್ಥಾನದ ಸಿಬ್ಬಂದಿಗೂ ಜಾಮೀನು ನೀಡಬೇಕು ಎಂದು ಕೋರಿದ್ದರು.