ಬೆಂಗಳೂರು:ರೈಲುಗಳ ಮೂಲಕ ರಾಜ್ಯಕ್ಕೆ ಬರುವ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಬರುವಂತೆ ರೈಲು ನಿಲ್ದಾಣದಲ್ಲಿ ಸೋಚನೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ರೈಲ್ವೆ ಬೋರ್ಡ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ನವದೆಹಲಿ, ಬಿಹಾರ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಕರ್ನಾಟಕಕ್ಕೆ ರೈಲುಗಳ ಮೂಲಕ ಆಗಮಿಸುತ್ತಿದ್ದಾರೆ. ಆದರೆ ಹೆಚ್ಚಿನ ಪ್ರಯಾಣಿಕರು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಅಡಿಯಲ್ಲಿ ನೋಂದಣಿ ಮಾಡಿಸುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರೈಲ್ವೆ ಬೋರ್ಟ್ಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪತ್ರ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಸೇವಾ ಸಿಂಧು ಪೋರ್ಟಲ್ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಸಂಗತಿಯ ಅರಿವಿಲ್ಲ. ಸೇವಾ ಸಿಂಧು ಪೋರ್ಟಲ್ ಅಡಿಯಲ್ಲಿ ನೋಂದಾಯಿಸದಿದ್ದರೆ ಅವರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಸೇವಾ ಸಿಂಧು ಪೋರ್ಟಲ್ ಅಡಿಯಲ್ಲಿ ನೋಂದಣಿ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ. ಹೀಗಾಗಿ ಮೂಲ ರೈಲ್ವೆ ನಿಲ್ದಾಣಗಳಿಗೆ ಸೂಚನೆ ನೀಡುವಂತೆ ಕೋರಿದ್ದಾರೆ.
'ಕರ್ನಾಟಕಕ್ಕೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅವರಿಗೆ ಹೋಮ್ ಕ್ವಾರಂಟೈನ್ಗೆ ಅನುಮತಿ ನೀಡಲಾಗುವುದಿಲ್ಲ' ಎಂದಿದ್ದಾರೆ. ಇದಲ್ಲದೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಮಯದಲ್ಲೇ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಪತ್ರದಲ್ಲಿ ಕೋರಿದ್ದಾರೆ.