ಬೆಂಗಳೂರು:ಜನಸಂಪರ್ಕಕ್ಕಾಗಿ ರಾಜ್ಯಗಳ ಮುಖ್ಯಮಂತ್ರಿಯೊಬ್ಬರು ವಾಟ್ಸ್‌ಆ್ಯಪ್ ಚಾನಲ್ ಬಳಸುತ್ತಿರುವವರಲ್ಲಿ ಸಿಎಂ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ. ಮುಖ್ಯಮಂತ್ರಿಗಳ ಪೈಕಿ ಮೊಟ್ಟಮೊದಲ ಜನಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮುಂದಡಿಯಿಟ್ಟಿದ್ದಾರೆ. ವಾಟ್ಸ್ ಆ್ಯಪ್ ಇತ್ತೀಚೆಗೆ ವಾಟ್ಸ್ ಆ್ಯಪ್ ಚಾನಲ್ ಫೀಚರ್ ಸೇರ್ಪಡೆಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಫ್ ಕರ್ನಾಟಕ ಹೆಸರಿನ ವಾಟ್ಸ್ ಆ್ಯಪ್ ಚಾನಲ್ ಆರಂಭಿಸಿದ್ದಾರೆ.
ಕಳೆದ ವಾರ ವಾಟ್ಸ್‌ಆ್ಯಪ್ ಚಾನಲ್ ಎಂಬ ಹೊಸ ಆವಿಷ್ಕಾರವನ್ನು ವಾಟ್ಸ್ ಆಪ್ ಪರಿಚಯಿಸಿತ್ತು. ಸೆಪ್ಟೆಂಬರ್ 12 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾನಲ್ ಆರಂಭಿಸಿ, ಈಗಾಗಲೇ 50,000ಕ್ಕೂ ಅಧಿಕ Subscribers ಹೊಂದಿದ್ದಾರೆ. ಆ ಮೂಲಕ ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸ್‌ಆ್ಯಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಅವರು ಮೊದಲಿಗರಾಗಿದ್ದಾರೆ.
ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು Chief Minister of Karnataka ಎಂಬ ಹೆಸರಿನ ಚಾನಲ್ ಕಾರ್ಯಾರಂಭ ಮಾಡಿದೆ. ತಾವು ಕೂಡ ವಾಟ್ಸ್‌ಆ್ಯಪ್‌ನ ಚಾನಲ್ ಸೆಕ್ಷನ್ನಲ್ಲಿ Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಬಹುದಾಗಿದೆ.
ಈ ಚಾನಲ್‌ನಲ್ಲಿ ಮುಖ್ಯಮಂತ್ರಿಯ ದೈನಂದಿನ ಸಭೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಚಾನೆಲ್ ಮೂಲಕ ತಮ್ಮ ಲೈಕ್ ಕೊಡಬಹುದಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸರ್ಕಾರದ ಸಾಧನೆ, ಕಾರ್ಯಕ್ರಮಗಳು, ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಎಲ್ಲಾ ಆಧುನಿಕತೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ತೆರೆದುಕೊಳ್ಳುವ ಮೂಲಕ ಜನರ ಜೊತೆ ಸಂಪರ್ಕದಲ್ಲಿರಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:'ನಂದಿ ಫಿಲ್ಮ್ ಅವಾರ್ಡ್' ಲೋಗೋ ಲಾಂಚ್ ಮಾಡಿದ ಸಿಎಂ ಸಿದ್ದರಾಮಯ್ಯ