ಕರ್ನಾಟಕ

karnataka

ETV Bharat / state

ಸೌಹಾರ್ದಯುತವಾಗಿ ರಾಷ್ಟ್ರಪತಿ ಭೇಟಿಯಾದ ಸಿದ್ದರಾಮಯ್ಯ.. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಕೇಂದ್ರಕ್ಕೆ ಸಿಎಂ ಪ್ರಸ್ತಾಪ - ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಸಿಎಂ ಸಿದ್ಧರಾಮಯ್ಯ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಸಿಎಂ ಸಿದ್ಧರಾಮಯ್ಯ

By

Published : Jun 21, 2023, 7:50 PM IST

ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು

ನವದೆಹಲಿ/ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಗಿದೆ. ಇಂದೇ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದ್ದು, ಪ್ರಾಸಂಗಿಕವಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡುವ ಉದ್ದೇಶವಿದೆ. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿಯನ್ನು ನೀಡಿರುವ ಭರವಸೆಯನ್ನು ಈಡೇರಿಸಬೇಕಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಕೋರಿ ಎಫ್​ಸಿಐಗೆ ಜೂನ್ 9 ರಂದು ಪತ್ರ ಬರೆಯಲಾಗಿತ್ತು. ಎಫ್​ಸಿಐ ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿಕ್​​ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯ ಕೋರಿರುವ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ ಎಂದು ಜೂನ್ 12 ರಂದು ಪತ್ರಮುಖೇನ ತಿಳಿಸಿದ್ದರು. ಎಫ್​ಸಿಐ ನ ಡೆಪ್ಯೂಟಿ ಮ್ಯಾನೇಜರ್ ಅನ್ನು ಭೇಟಿಯಾಗಿ ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ ಜೂನ್ 13 ರಂದು ಕೇಂದ್ರ ಆಹಾರ ಇಲಾಖೆಯವರು ಎಫ್​ಸಿಐಗೆ ಪತ್ರ ಬರೆದು ರಾಜ್ಯಗಳಿಗೆ ಕೇಂದ್ರದಿಂದ ಅಕ್ಕಿ ಸರಬರಾಜನ್ನು ನಿಲ್ಲಿಸಲಾಗಿದೆ ಎಂದಿದ್ದರು. ನಂತರ ಜೂನ್ 14 ರಂದು ಎಫ್​ಸಿಐನ ಅಧ್ಯಕ್ಷರು ಪತ್ರ ಬರೆದು, ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮೊದಲು ಅಕ್ಕಿ ನೀಡುವುದಾಗಿ ಒಪ್ಪಿಕೊಂಡು ನಂತರ ನಿರಾಕರಿಸಿದ್ದು, ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ವಾಗ್ದಾಳಿ ನಡೆಸಿದ್ದರು.

ಅನೇಕ ರಾಜ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ: ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಪಡೆಯುವ ಬಗ್ಗೆ ಅನೇಕ ರಾಜ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಅವರು ಸಂಪೂರ್ಣ 2.28 ಲಕ್ಷ ಮೆಟ್ರಿಕ್​ ಟನ್ ನೀಡಲು ಸಾಧ್ಯವಿಲ್ಲ. ಆಂಧ್ರಪ್ರದೇಶದವರು 42 ರೂ. ಗಳಿಗೆ ಅಕ್ಕಿ ನೀಡುವುದಾಗಿ ತಿಳಿಸಿದ್ದು, ಸಾರಿಗೆ ವೆಚ್ಚ ಅಧಿಕವಾಗಲಿದೆ. ತೆಲಂಗಾಣದವರು ಭತ್ತ ಮಾತ್ರ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಛತ್ತೀಸ್​ಗಢದ ಮುಖ್ಯಮಂತ್ರಿಗಳು ಒಂದು ತಿಂಗಳಿಗೆ ಮಾತ್ರ 1 ಲಕ್ಷ ಮೆಟ್ರಿಕ್ ಟನ್ ನೀಡುವುದಾಗಿ ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ

ರಾಜ್ಯಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಿರುವ ಬಗ್ಗೆ ನೀತಿ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಅಂತರ ಸಚಿವಾಲಯಗಳ ಸಭೆ ನಡೆದಿದೆ ಹಾಗೂ ಮಾಹಿತಿಯ ಕೊರತೆಯಿಂದ ಪತ್ರ ಬರೆದಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಎಫ್​ಸಿಐ ಕೇಂದ್ರ ಸರ್ಕಾರದ ಸ್ವಾಮ್ಯ ಸಂಸ್ಥೆಯಾಗಿದ್ದು, ಅಕ್ಕಿ ನೀಡುವುದಾಗಿ ಒಪ್ಪಿ ಪತ್ರ ಬರೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹಾಗೂ ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ:CM Siddaramaiah: ಆಸ್ಪತ್ರೆಯಲ್ಲಿರುವ ಪತ್ನಿ ಆರೋಗ್ಯ ವಿಚಾರಿಸಿ, ದಿಲ್ಲಿಗೆ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details