ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರು ತಿಂಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹತಾಶರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಬರುತ್ತದೆ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿದ್ದರು. ಈಗ ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಮ್ಮದು ಜಾತ್ಯತೀತ ಸರ್ಕಾರ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾತಿ ನೋಡಿ ಕೊಟ್ಟಿಲ್ಲ. ಎಲ್ಲಾ ಜಾತಿಗಳನ್ನೂ ಸಮಾನವಾಗಿ ಕಾಣುತ್ತೇವೆ ಎಂದರು. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿರುವ ಬಗ್ಗೆ ಮಾತನಾಡಿ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಮುಂದಿನ ಬಜೆಟ್ನಲ್ಲಿ ಮಾಸಾಶನ ಹೆಚ್ಚಳ-ಸಿಎಂ:ಇದಕ್ಕೂ ಮೊದಲು, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು, ನೀವೆಲ್ಲಾ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ ಎಂದು ತಿಳಿಸಿದರು.