ಬೆಂಗಳೂರು : ದೇಶದ ಆಸ್ತಿ ಮತ್ತು ಉತ್ಪಾದನೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಗ್ರಹ ಆಗುತ್ತಿರುವುದರಿಂದ ಇನ್ನೂ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಮಲಾ ಹಂಪನಾ ಸಾಹಿತ್ಯ ವೇದಿಕೆ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ 'ಬೆಳಕು ಬಿತ್ತಿದವರು', 'ಪ್ರಾಕೃತಾ ಕಥಾ ಸಾಹಿತ್ಯ' ಮತ್ತು 'ದ ಜರ್ನಿ ಆಫ್ ಲೈಫ್' ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಎಂ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ ತಳಹದಿಯ ಮೇಲೆ ರೂಪುಗೊಳ್ಳದಿದ್ದರೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ ಎಂದಿದ್ದರು. ಹೀಗಾಗಿ, ಸ್ವಾತಂತ್ರ್ಯದ ಉದ್ದೇಶ ಈಡೇರಬೇಕಾದರೆ ಸಮಾಜದಲ್ಲಿ ಅವಕಾಶ ಮತ್ತು ಸಂಪತ್ತು ಸಮಾನ ಹಂಚಿಕೆ ಆಗಿ ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಾತಿ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅಂತರ್ಜಾತಿ ವಿವಾಹ ಜಾತಿ ವಿನಾಶದ ಪ್ರಥಮ ಹೆಜ್ಜೆ. ನಮ್ಮ ಸಂವಿಧಾನ ಕೂಡ ನಮ್ಮದು ಜಾತ್ಯತೀತ ಸಮಾಜ ಎಂದು ಹೇಳಿದೆ. ಆ ಕಾಲದಲ್ಲೇ ಅಂತರ್ಜಾತಿ ವಿವಾಹವಾಗಿ ತಮ್ಮ ಮೂವರೂ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿರುವ ಹಂ.ಪ. ನಾಗರಾಜಯ್ಯ ಮತ್ತು ಕಮಲಾ ಹಂಪನ ಅವರು ನಿಜಕ್ಕೂ ಆದರ್ಶ ದಂಪತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಯಾವುದಿದ್ದರೂ ನಾವು ಅಂತಿಮವಾಗಿ ಮನುಷ್ಯರಾಗಬೇಕು. ಮನುಷ್ಯ ಮನುಷ್ಯನ ಪ್ರೀತಿಸುವುದೇ ಧರ್ಮ. ದ್ವೇಷಿಸುವುದು ಅಧರ್ಮ. ಆದರೆ, ಇಂದು ದ್ವೇಷವನ್ನು ಆರಾಧಿಸುವ ಸಮಾಜವನ್ನು ನಿರ್ಮಿಸುವ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪ್ರಜ್ಞಾವಂತರಾದ ನಾವೆಲ್ಲರೂ ತಡೆ ಹಾಕಬೇಕು, ದ್ವೇಷಕ್ಕೆ ಒತ್ತು ಕೊಡಬಾರದು, ಸಮಾಜಮುಖಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.