ಬೆಂಗಳೂರು :ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಸತತ 8 ಗಂಟೆಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿ ಮತ್ತು ಸಿಇಒಗಳ ಸಭೆ ನಡೆಸಿದರು. ಸಭೆಯ ಕೊನೆಯಲ್ಲಿ, ಮೂರು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇವೆ. ಅಷ್ಟರಲ್ಲಿ ಈ ಎರಡು ದಿನಗಳ ಕಾಲ ಕೈಗೊಂಡ ನಿರ್ಣಯಗಳು ಹಾಗೂ ಚರ್ಚೆಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲನೆ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ನೀಡಿರುವ ಸಲಹೆಗಳನ್ನು, ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾಧಿಕಾರಿಗಳು, ಸಿಇಒಗಳು ಮನಸು ಮಾಡಿದರೆ ಆರ್ಥಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕವಾಗಿ ರಾಜ್ಯದ ಚಿತ್ರಣ ಬದಲಿಸಲು ಸಾಧ್ಯ ಎಂದರು.
'5 ಗ್ಯಾರಂಟಿಗಳಿಗೆ 32 ಸಾವಿರ ಕೋಟಿ ರೂ ವೆಚ್ಚ': ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರು. ಸಿಇಒಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಬಹಳ ಪರಿಣಾಮಕಾರಿ ಬದಲಾವಣೆ ಮಾಡಲು ಅವಕಾಶವಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 32 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದರೆ ಒಬ್ಬರಿಗೆ 80 ಸಾವಿರ ರೂ. ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಹಣ ನೀಡುತ್ತಿದ್ದೇವೆ. ಆಗಸ್ಟ್ ತಿಂಗಳಲ್ಲಿ 600 ಕೋಟಿ ರೂ.ಗೂ ಹೆಚ್ಚು ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
'ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ': ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಕುಟುಂಬಗಳಿಗೆ 2,000 ರೂ. ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಲು ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ, ಇದರಿಂದ ಆರ್ಥಿಕ ಚಟುವಟಿಕೆ ಮತ್ತು ವಾರ್ಷಿಕ ವರಮಾನ ಹೆಚ್ಚುತ್ತದೆ. ಅಂತೆಯೇ, ಜಿಡಿಪಿ ಕೂಡಾ ಬೆಳವಣಿಗೆಯಾಗುತ್ತದೆ. ಸರ್ಕಾರ ಇಷ್ಟೆಲ್ಲಾ ಹಣ ವೆಚ್ಚ ಮಾಡುವಾಗ ಜನರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಲೇ ಬೇಕು. ಗ್ರಾಮೀಣ ಪ್ರದೇಶದಲ್ಲಿ, ಜನಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಗಮನ ಕೊಡಬೇಕು. ಈ ಐದು ಗ್ಯಾರಂಟಿಗಳು ಮತ್ತು ಬೇರೆ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಇವುಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದರು.