ನವದೆಹಲಿ: ವಿಶೇಷ ಅಧಿವೇಶನದಲ್ಲಿ ಎಲ್ಲಾ ಶಾಸಕರ ಪ್ರಮಾಣ ವಚನ ಸ್ವೀಕಾರವಾಗುತ್ತಿದ್ದಂತೆ ಸಂಪುಟ ವಿಸ್ತರಣೆ ಚಟುವಟಿಕೆ ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆಯಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಜೆ ಆರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿದ್ದರು. ಶಿವಕುಮಾರ್ ಮೊದಲೇ ದೆಹಲಿ ತಲುಪಿದ್ದರು. ಸಿದ್ದರಾಮಯ್ಯ ಈಗ ದೆಹಲಿ ತಲುಪಿದ್ದು, ಕಾಂಗ್ರೆಸ್ ಉನ್ನತ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ನಾಯಕರ ಜೊತೆ ಬೆಂಬಲಿಗರು ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಇಂದು ಸಂಜೆ ಹೊರಟಿರುವುರಿಂದ ನಾಳೆ ಹೈಕಮಾಂಡ್ ಜೊತೆಗೆ ಸಿಎಂ ಮತ್ತು ಡಿಸಿಎಂ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ನಾಳೆಯ ಸಭೆಯಲ್ಲ ಪ್ರಬಲ ಸಚಿವ ಸ್ಥಾನ ಆಕಾಂಕ್ಷಿಗಳೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ದೆಹಲಿ ತಲುಪಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ,"ಇದು ಸಾಮಾನ್ಯ ಭೇಟಿಯಾಗಿದ್ದು, ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ. ನಾವು ನಮ್ಮ ಸಚಿವ ಸಂಪುಟ ವಿಸ್ತರಣೆಯನ್ನು ಆದಷ್ಟು ಬೇಗ ಮುಗಿಸಬೇಕು. ಅದು ಪ್ರಕ್ರಿಯೆಯಲ್ಲಿದೆ. ಮುಖ್ಯಮಂತ್ರಿ ಕೂಡ ಬರಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉನ್ನತ ನಾಯಕರನ್ನು ಭೇಟಿ ಮಾಡಲಾಗುವುದು" ಎಂದು ಹೇಳಿದ್ದಾರೆ.
ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಪಕ್ಷದ ಅಧ್ಯಕ್ಷನಾಗಿ ನಾನು ನಿಮಗೆ ಹೇಳುತ್ತಿದ್ದೇನೆ, ಯಾವುದೇ ಆಂತರಿಕ ಸಮಸ್ಯೆಗಳಿಲ್ಲ. ಎಲ್ಲ ಕಾರ್ಯಕರ್ತರು ಸಚಿವರಾಗಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಒತ್ತಡಗಳು ಬರುವುದು ಸಹಜ. ಇದು ಯಾವುದೇ ಆಂತರಿಕ ಸಮಸ್ಯೆಯಲ್ಲ"ಎಂದರು.