ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ತಾಕೀತು ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ. ಕೋವಿಡ್ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವಿನಂತಿಸುತ್ತೇನೆ. ಮಾನವೀಯತೆಯಿಂದ ನಡೆದುಕೊಳ್ಳೋಣ, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ತಪ್ಪಿತಸ್ಥ ಸಿಬ್ಬಂದಿ ಅಮಾನತು:
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿರುವುದು ತೀವ್ರ ಖಂಡನಿಯ. ಈ ಪ್ರಕರಣದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಂತ್ಯಸಂಸ್ಕಾರ ನಡೆಸಿದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಿರುವುದಲ್ಲದೆ, ಜಿಲ್ಲಾಡಳಿತ ಈ ಘಟನೆ ಖಂಡಿಸಿ ಕ್ಷಮೆ ಯಾಚಿಸಿದೆ. ಕೋವಿಡ್-19 ರಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಪ್ರತ್ಯೇಕ ನಿಯಮಾವಳಿಗಳಿದ್ದು, ಅವುಗಳನ್ನು ಪಾಲಿಸಲು ಇಲಾಖೆಯ ಎಲ್ಲ ಸಿಬ್ಬಂದಿಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅಂತ್ಯ ಸಂಸ್ಕಾರವನ್ನು ಸೂಕ್ತ ಹಾಗೂ ಸಕಲ ಗೌರವಗಳಿಂದ ನೆರವೇರಿಸುವುದು ನಮ್ಮ ಸಂಸ್ಕೃತಿ. ಸೋಂಕಿನಿಂದ ಮೃತಪಟ್ಟವರು ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡದೆ ಸಲ್ಲಿಸಬೇಕಾದ ಗೌರವ ಸಲ್ಲಿಸೋಣ. ಮಾನವೀಯತೆ ಮೆರೆಯೋಣ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ