ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕರ ವಾಹನವೇ ಬೇಕಂತೆ. ಮುಖ್ಯಮಂತ್ರಿ ಸ್ಥಾನದ ಜೊತೆಯಲ್ಲಿಯೇ ಬಂದ ಹೊಸ ಕಾರಿನಲ್ಲಿ ಸಂಚರಿಸಲು ನಿರಾಕರಿಸಿರುವ ಬಿ.ಎಸ್.ವೈ ಪ್ರತಿಪಕ್ಷ ನಾಯಕರಾಗಿದ್ದಾಗ ಬಳಸುತ್ತಿದ್ದ ಸರ್ಕಾರಿ ಕಾರನ್ನೇ ಇದೀಗ ಮುಖ್ಯಮಂತ್ರಿ ಆದ ಮೇಲೂ ಬಳಸುತ್ತಿದ್ದಾರೆ.
ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಎ-01 ಜಿ 6309 ಸಂಖ್ಯೆಯ ಬಿಳಿಬಣ್ಣ ಟೊಯೋಟಾ ಫಾರ್ಚುನರ್ ಕಾರನ್ನು ಸರ್ಕಾರ ನೀಡಿತ್ತು. ಸರ್ಕಾರಿ ಕಾರ್ಯ ನಿಮಿತ್ತ ಸಂಚರಿಸುವ ವೇಳೆ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಕಳೆದ 8 ತಿಂಗಳಿನಿಂದ ಬಿಎಸ್ವೈಗೆ ಈ ಕಾರು ಬಹಳ ಅಚ್ಚು ಮೆಚ್ಚಾಗಿದೆ. ಒಂದು ರೀತಿಯಲ್ಲಿ ಬಿಳಿಬಣ್ಣ ಟೊಯೋಟಾ ಫಾರ್ಚುನರ್ ಕಾರು ಲಕ್ಕಿ ಕಾರು ಎನ್ನುವ ಸೆಂಟಿಮೆಂಟ್ ಬಿಎಸ್ವೈ ಅವರಿಗಿದೆಯಂತೆ.
ಈ ಕಾರಿನ ಮೇಲೆ ಯಡಿಯೂರಪ್ಪ ಅವರಿಗೆ ಎಷ್ಟು ಮೋಹವಿದೆ ಎಂದರೆ ಸ್ವತಃ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೂ ಕಾರು ಬದಲಾಯಿಸಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕೆಎ-59 ಜಿ-9000 ಸಂಖ್ಯೆಯ ಬಿಳಿ ಬಣ್ಣದ ಟೊಯೋಟಾ ಫಾರ್ಚುನರ್ ಕಾರನ್ನು ನೀಡಲಾಗಿದೆ. ಆದರೂ ರಾಜಭವನದಲ್ಲಿ ಯಡಿಯೂರಪ್ಪ ಹುಡುಕಿದ್ದು ತಮ್ಮ ಹಳೆಯ ಕಾರನ್ನೇ.
ಮುಖ್ಯಮಂತ್ರಿಗಳಿಗೆ ನೀಡಿರುವ ವಾಹನವನ್ನು ಸ್ವೀಕರಿಸಿದರೂ ಅದನ್ನು ಬಳಸದ ಬಿಎಸ್ವೈ ಪ್ರತಿಪಕ್ಷ ನಾಯಕರಾಗಿ ಕಳೆದ 8 ತಿಂಗಳಿನಿಂದ ಬಳಕೆ ಮಾಡುತ್ತಿರುವ ಟೊಯೋಟಾ ಫಾರ್ಚುನರ್ ಕಾರನ್ನೇ ಈಗಲೂ ಬಳಸುತ್ತಿದ್ದಾರೆ. ಎಲ್ಲ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿಗೆ ತೆರಳಲು ಬಿಎಸ್ವೈ ತಮ್ಮ ಹಳೆಯ ಕಾರನ್ನೇ ಬಳಕೆ ಮಾಡುತ್ತಿದ್ದಾರೆ.