ಕರ್ನಾಟಕ

karnataka

ಲರ್ನಿಂಗ್‌ ಫ್ರಮ್‌ ಎನಿವೇರ್‌ ಪರಿಕಲ್ಪನೆ: ಕಲಿಕಾ ನಿರ್ವಹಣಾ ವ್ಯವಸ್ಥೆಗೆ ಚಾಲನೆ ಕೊಟ್ಟ ಸಿಎಂ

By

Published : Nov 30, 2020, 5:16 PM IST

ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಶಿಕ್ಷಣ ಇಲಾಖೆಯು ರೂಪಿಸಿರುವ ಕರ್ನಾಟಕ ಎಲ್ಎಂಎಸ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

banglore
ಕರ್ನಾಟಕ ಎಲ್ಎಂಎಸ್​ಗೆ ಚಾಲನೆc

ಬೆಂಗಳೂರು:ಸರ್ಕಾರಿ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಬಲ್ಲ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆ ಕರ್ನಾಟಕ ಎಲ್ಎಂಎಸ್ (ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್)‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಶಿಕ್ಷಣ ಇಲಾಖೆಯು ರೂಪಿಸಿರುವ ಕರ್ನಾಟಕ ಎಲ್ಎಂಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಡಿಜಿಟಲ್ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದೇಶದಲ್ಲಿಯೇ ಮೊದಲ ಬಾರಿ ಜಾರಿಗೊಳಿಸಿರುವ ಕರ್ನಾಟಕ ಎಲ್ಎಂಎಸ್ ಕಾರ್ಯಕ್ರಮದಿಂದ ಸಮಗ್ರ ಉನ್ನತ ಶಿಕ್ಷಣದ ಗುಣಮಟ್ಟ ಹಾಗೂ ಸಾಮಾನ್ಯ ಪ್ರವೇಶಾತಿ ಅನುಪಾತಗಳು ವರ್ಧಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಿಕಾ ನಿರ್ವಹಣಾ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ಎಲ್ಎಂಎಸ್ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅವಕಾಶ ದೊರೆಯುವುದಲ್ಲದೆ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 87 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳು ಮತ್ತು 14 ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಹಾಗೂ ಶಿಕ್ಷಕರ ನಿರಂತರ ಮೌಲ್ಯ ಮಾಪನ ನಡೆಯುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಹಾಗೂ ಸುಮಾರು 24,000 ಅಧ್ಯಾಪಕರ ಬೋಧನೆ ಮತ್ತು ಕಲಿಕೆಗಳಲ್ಲಿ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಡಿಜಿಟಲ್ ಕಲಿಕೆ ಯೋಜನೆಯನ್ನು ಒಟ್ಟು ರೂ. 34.14 ಕೋಟಿ ವೆಚ್ಚದಲ್ಲಿ ಎರಡು ರೀತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೊದಲನೆಯದಾಗಿ ಎಲ್ಎಂಎಸ್ ಆಧಾರಿತ ಡಿಜಿಟಲ್ ಕಲಿಕೆಯ ಅನುಷ್ಠಾನ ಹಾಗೂ ಎರಡನೆಯದಾಗಿ 2,500 ಐ.ಸಿ.ಟಿ ಎನೇಬಲ್ಡ್ತ್​ ತರಗತಿಗಳ ಸ್ಥಾಪನೆಯನ್ನು ಮಾಡಲಾಗುತ್ತದೆ. ಅಪೇಕ್ಷಿತ ಸಮಯ ಹಾಗೂ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಕರ ಸಾಮಗ್ರಿ ದೊರೆಯಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮಾಹಿತಿ ಆಧರಿಸಿ ವಿಶ್ಲೇಷಿಸುವುದು.

ಬೋಧನೆ, ಕಲಿಕೆ, ನಿರಂತರ ಪರೀಕ್ಷೆ ಮತ್ತು ತಿದ್ದುಪಡಿ ಕ್ರಮಗಳ ಮೂಲಕ ಬೋಧನೆ-ಕಲಿಕೆಗಳು ಪರಿಷ್ಕರಿಸಲು ಅವಕಾಶವಿದ್ದು, ಶಿಕ್ಷಣಕ್ಕೆ ಪೂರ್ಣತೆ ದೊರೆಯಲಿದೆ ಎಂದು ಅವರು ನುಡಿದರು.

ಡಿಸಿಎಂ ಹೇಳಿದ್ದೇನು?

ಈ ಉಪಕ್ರಮದಿಂದ ಸರ್ಕಾರಿ ಕಾಲೇಜುಗಳ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಈ ಲರ್ನಿಂಗ್‌ ಸಿಸ್ಟಮ್‌ನಲ್ಲಿ ಪರಿಹಾರಗಳಿವೆ. ಎಲ್ಲೇ ಇದ್ದರೂ ವಿದ್ಯಾರ್ಥಿಗಳು ಕಲಿಯಬಹುದು. ಲೈವ್‌ ತರಗತಿಗಳಲ್ಲಿ ಭಾಗಿಯಾಗಬಹುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಜಾಗತಿಕ ಮಟ್ಟದಲ್ಲಿ ಬೋಧನೆ- ಕಲಿಕೆಯಲ್ಲಿ ಗುರುತರ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕವೂ ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ. ತಂತ್ರಜ್ಞಾನದ ಮೂಲಕ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ ಎಂದರು.

ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳು:

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ಈಗ ಸರ್ಕಾರ ಎಂಜಿನೀಯರಿಂಗ್‌, ಪದವಿ, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಒಟ್ಟು 8,000 ತರಗತಿ ಕೊಠಡಿಗಳಿವೆ. ಇವುಗಳ ಪೈಕಿ 2,500 ಕೊಠಡಿಗಳನ್ನು ಕೂಡಲೇ ಅತ್ಯಂತ ವೇಗದ ವೈಫೈ ವ್ಯವಸ್ಥೆ ಇರುವ ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳನ್ನಾಗಿ ರೂಪಿಸಲಾಗುತ್ತಿದೆ. ಉಳಿದ 5,500 ಕೊಠಿಡಿಗಳನ್ನು 4ರಿಂದ 5 ತಿಂಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಮುಗಳನ್ನಾಗಿ ಪರಿವರ್ತಿಸಲಾಗುವುದು. ಇಷ್ಟೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ಲಕ್ಷ ವಿದ್ಯಾರ್ಥಿಗಳ ಹಾಗೂ ಎಲ್ಲಾ ಬೋಧಕರು ಏಕಕಾಲದಲ್ಲಿಯೇ ಲಾಗಿನ್‌ ಆಗಬಹುದು ಎಂದು ಮಾಹಿತಿ ನೀಡಿದರು.

ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಹೆಗ್ಗಳಿಕೆ ಸೇರಿ ಹೊಸ ಗರಿಯೆಂದರೆ, ನೂತನ ಕಲಿಕಾ ನಿರ್ವಹಣಾ ಪದ್ಧತಿ. ಆನ್‌ಲೈನ್‌, ಆಫ್‌ಲೈನ್‌ನಲ್ಲೂ ಈ ಮೂಲಕ ಕಲಿಯಬಹುದು. ಯಾವುದೇ ಸಂದರ್ಭದಲ್ಲಿ, ಎಲ್ಲೇ ಇದ್ದರೂ ತಮ್ಮ ವ್ಯಾಸಂಗವನ್ನು ಮುಂದುವರಿಸಬಹುದು. ಡೆಸ್ಕ್‌ಟಾಪ್‌, ಆಂಡ್ರಾಯ್ಡ್‌, ಐಒಎಸ್‌ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಲಾಗಿದೆ. ಇದೆಷ್ಟು ಪರಿಣಾಮಕಾರಿ ಎಂದರೆ ದಿನಿತ್ಯದ ಕಂಟೆಂಟ್‌ ನೀಡಿಕೆಯ ಜೊತೆಗೆ, ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಮಾಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹದು ಎಂದರು.

ಏನಿದು ಕಲಿಕಾ ನಿರ್ವಹಣಾ ವ್ಯವಸ್ಥೆ?

* ಕೋವಿಡ್‌ ಹಿನ್ನೆಲೆಯಲ್ಲಿ ಡಿಜಿಟಲ್‌ ಕಲಿಕೆಗೆ ಎಲ್ಲಡೆ ಹೆಚ್ಚು ಒತ್ತು ಸಿಗುತ್ತಿದೆ. ಈ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಲ್‌ಎಂಎಸ್ ಆಧಾರಿತ ಡಿಜಿಟಲ್‌ ಕಲಿಕೆಯನ್ನು ʼಕರ್ನಾಟಕ ಎಲ್‌ಎಂಎಸ್ʼ ಎಂಬ ಹೆಸರಿನಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, 14 ಸರ್ಕಾರಿ ಎಂಜಿನಿಯರಿಂಗ್ ಮತ್ತು 87 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಈ ಉಪಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಹಾಗೂ 24,000 ಅಧ್ಯಾಪಕರ ಬೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಲಿವೆ. ನಮ್ಮ ಶಕ್ತಿ, ನಮ್ಮ ಭವಿಷ್ಯ ಎನ್ನುವುದು ಈ ಪರಿಕಲ್ಪನೆಯ ಟ್ಯಾಗ್‌ಲೈನ್‌ ಆಗಿದೆ.

* ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಮುಖ್ಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಅವರ ಕಲಿಕೆಯ ಮಟ್ಟವನ್ನು ಈ ಹೊಸ ಪದ್ಧತಿ ಗಣನೀಯವಾಗಿ ಸುಧಾರಿಸಲಿದೆ.

* ಎಲ್‌ಎಂಎಸ್‌ ಆಧಾರಿತ ಡಿಜಿಟಲ್‌ ಕಲಿಕೆ ಪದ್ಧತಿಯು ವಿಷಯ ಸಂವಹನ, ವಿಷಯ ಲಭ್ಯತೆ ಮತ್ತು ಮೌಲ್ಯಮಾಪನದಲ್ಲಿ ಗುರುತರ, ಮಹತ್ವದ ಬದಲಾವಣೆಗಳನ್ನು ತರುತ್ತದೆ. ಈ ಮೂಲಕ ಅದು ಡಿಜಿಟಲ್‌ ಅಂತರವನ್ನು ಅಳಿಸಿ ಹಾಕುತ್ತದೆ. ತನ್ಮೂಲಕ ಬೋಧನೆ- ಕಲಿಕೆಗಳಲ್ಲಿ ಕ್ರಾಂತಿಕಾರಕ ಮುನ್ನಡೆಯನ್ನು ಸಾಧಿಸಬಲ್ಲ ಪರಿಣಾಮಕಾರಿ ವೇದಿಕೆಯಾಗಿದೆ. ಇದರಿಂದ ಎಲ್ಲಾ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದು, ಸಮಯವನ್ನು ಉಳಿಸಬಹುದು.

* ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರು, ವಿವಿಧ ಭಾಷೆಗಳಲ್ಲಿ 14 ಸಂಯೋಜಿತ ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಪೂರಕವಾಗಿ ಸ್ವ-ಕಲಿಕೆ ಮತ್ತು ಬೋಧನೆಗೆ ಸೂಕ್ತವಾದ ಇ-ಕಂಟೆಂಟ್​ನ್ನು ಪಿಪಿಟಿ, ವಿಡಿಯೋ, ಅಸೈನ್‌ಮೆಂಟುಗಳು, ಇ-ಅಧ್ಯಯನ ಮಾಹಿತಿ, ಪ್ರಶ್ನೋತ್ತರ ವಿವರ, ಕ್ವಿಜ್‌ ರೂಪದಲ್ಲಿ ಅಭಿವೃದ್ಧಿಗೊಳಿಸಿದ್ದು, ಇದರ ಜೊತೆಗೆ ವಿವಿಗಳವಾರು ಕೇಂದ್ರೀಕೃತಗೊಂಡು, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಸಾರಪಠ್ಯವೂ ಬೋಧಕರಿಗೆ ಲಭ್ಯವಾಗಲಿದೆ.

*ಈ ಕಲಿಕಾ ನಿರ್ವಹಣೆ ಪದ್ದತಿಯಲ್ಲಿ ಶಿಕ್ಷಣದ ವಿವಿಧ ಅಂಶಗಳ ವೈಜ್ಞಾನಿಕ ಮಾಹನಕ್ಕೆ ಪೂರಕವಾಗಿ ವಿಶ್ಲೇಷಣೆ ಇರುತ್ತದೆ. ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಕಾಲೇಜುಗಳ ಹಿಂದಿನ ಮಾಹಿತಿ, ಕಂಟೆಂಟ್‌ ರೇಟಿಂಗ್‌, ವಿದ್ಯಾರ್ಥಿಗಳಿಂದ ಮತ್ತು ತರಗತಿಗಳಲ್ಲಿ ಅಧ್ಯಾಪಕರಿಂದ ಇ-ಕಂಟೆಂಟ್‌ ಬಳಕೆಯ ಟ್ರ್ಯಾಕಿಂಗ್‌, ಸಂಪೂರ್ಣ ವಿವರಗಳುಳ್ಳ ವರದಿ ತಯಾರಿಕೆ ಇತ್ಯಾದಿಗಳಿಗೆ ಅವಕಾಶ ಕಲಿಸಲಾಗಿದೆ.

* ಎಲ್‌ಎಂಎಸ್‌ ಆಧಾರಿತ ಡಿಜಿಟಲ್‌ ಕಲಿಕೆಯಿಂದ ಉತ್ತಮ ಗುಣಮಟ್ಟದ ಬೋಧನೆ, ಕಲಿಕೆ, ನಿರಂತರ ಮೌಲ್ಯಮಾಪನ ಮತ್ತು ಮಾಹಿತಿ ಆಧಾರಿತ ತಿದ್ದುಪಡಿ ಕ್ರಮಗಳಿಂದ ಇಡೀ ಉನ್ನತ ಶಿಕ್ಷಣಕ್ಕೆ ಒಂದು ರೀತಿಯ ಪರಿಪೂರ್ಣತೆ ಬರಲಿದೆ.

ABOUT THE AUTHOR

...view details