ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸಾಲದ ಬಲ ಹೊಂದಿರುವ ಬಜೆಟ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸಲಿದ್ದು, ಆ ಮೂಲಕ ರಾಜ್ಯದ ಜನಸಾಮಾನ್ಯರ ಮೇಲಿನ ಸಾಲದ ಹೊರೆ ಒಟ್ಟು ಐದು ಲಕ್ಷ ಕೋಟಿ ರೂಗಳ ಗಡಿ ಮೀರಲಿದೆ.
ಸಿಎಂ ಬೊಮ್ಮಾಯಿ ಇಂದು ಮಧ್ಯಾಹ್ನ 12.30ಕ್ಕೆ ಮಂಡಿಸಲಿರುವ 2022-23ನೇ ಸಾಲಿನ ಬಜೆಟ್ ಗಾತ್ರ 2.60 ಲಕ್ಷ ಕೋಟಿ ರೂ. ಗಡಿ ತಲುಪುವುದು ಬಹುತೇಕ ನಿಶ್ಚಿತವಾಗಿದೆ. ಕಳೆದ ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ಗಾತ್ರ 2.47 ಲಕ್ಷ ಕೋಟಿ ರೂ.ಗಳಷ್ಟಿದ್ದು, ಆ ಗಾತ್ರವನ್ನು ಸರಿದೂಗಿಸಲು 71 ಸಾವಿರ ಕೋಟಿ ರೂ.ಗಳಷ್ಟು ಸಾಲ ಮಾಡಲಾಗಿತ್ತು. ಈ ಬಾರಿಯ ಹಲವು ಮೂಲಗಳಿಂದ ಬರುವ ಹಣ ಕಟ್ ಆಗಲಿದ್ದು, ಇದೇ ಕಾರಣಕ್ಕಾಗಿ ಹೆಚ್ಚು ಸಾಲ ಪಡೆಯಲು ಬಜೆಟ್ ಗಾತ್ರವನ್ನು ಹೆಚ್ಚಿಸುವ ಅನಿವಾರ್ಯತೆ ಮುಖ್ಯಮಂತ್ರಿ ಬೊಮ್ಮಾಯಿ ಸಿಲುಕಿದ್ದಾರೆ.
ಬಜೆಟ್ ಗೆ ಹಣದ ತೀವ್ರ ಕೊರತೆ:ಇದುವರೆಗೆ ರಾಜ್ಯದ ಬಜೆಟ್ಗೆ ಕೇಂದ್ರದಿಂದ ಹನ್ನೆರಡು ಸಾವಿರ ಕೋಟಿ ರೂ.ಗಳಷ್ಟು ಜಿ.ಎಸ್.ಟಿ ಪರಿಹಾರದ ಮೊತ್ತ ಲಭ್ಯವಾಗುತ್ತಿತ್ತು. ಆದರೆ ಈ ಬಾರಿಯಿಂದ ಜಿ.ಎಸ್.ಟಿ ಪರಿಹಾರದ ಮೊತ್ತ ಸ್ಥಗಿತವಾಗಲಿದೆ. ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ಲಭ್ಯವಾಗುತ್ತಿದ್ದ ಅನುದಾನದ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಕಡಿತವಾಗಲಿದ್ದು, ಆ ಮೂಲಕ ಪ್ರಸಕ್ತ ಸಾಲಿನ ಬಜೆಟ್ ಗೆ ಹಣದ ತೀವ್ರ ಕೊರತೆ ಎದುರಾಗಲಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸೋತ ಸಿಟ್ಟು: 5 ಹಳ್ಳಿ ಸಂಪರ್ಕಿಸುವ ರಸ್ತೆಗೆ ಬಂಡೆಗಳನ್ನಿಟ್ಟು ಬಂದ್ ಮಾಡಿದ ಅಭ್ಯರ್ಥಿ!
ಹೀಗಾಗಿ ಸರ್ಕಾರದ ನಿಗದಿತ ಆದಾಯದಲ್ಲಿ ಗಣನೀಯ ಪ್ರಮಾಣದ ಹಣವನ್ನು ಬದ್ಧತಾ ವೆಚ್ಚಕ್ಕೆ ಮೀಸಲಿಟ್ಟು, ಉಳಿದಂತೆ ಅಭಿವೃದ್ಧಿ ಕಾರ್ಯಕ್ಕೆ ಸಾಲದ ಹಣವನ್ನು ನೆಚ್ಚಿಕೊಳ್ಳುವ ದುಃಸ್ಥಿತಿ ಎದುರಾಗಿದೆ.
ಬಜೆಟ್ಗೆ ಕೆಂದ್ರವನ್ನು ಅವಲಂಬಿಸಬೇಡಿ ಎಂದಿದ್ದ ಅಮಿತ್ ಶಾ:ಸಾಲದು ಎಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ದೆಹಲಿಗೆ ಹೋದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಜೆಟ್ ಅನ್ನು ಸ್ವಂತ ಸಂಪನ್ಮೂಲದ ಬೆಂಬಲದೊಂದಿಗೆ ಮಾಡಿಕೊಳ್ಳಿ, ಕೇಂದ್ರ ಸರ್ಕಾರದ ಮೇಲೆ ಅತಿಯಾದ ಅವಲಂಬನೆ ಬೇಡ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತೆರಿಗೆಗಳ ಮೂಲಕ ಸಂಗ್ರಹಿಸುವ ಹಣದ ಪೈಕಿ ಬಹುತೇಕ ಪಾಲನ್ನು ಬದ್ಧತಾ ವೆಚ್ಚಕ್ಕೆ ಮೀಸಲಿಟ್ಟು, ಅಭಿವೃದ್ಧಿಗಾಗಿ ಹೆಚ್ಚು ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಬದ್ಧತಾ ವೆಚ್ಚಗಳಿಂದ ಸರ್ಕಾರಕ್ಕೆ ಹೊರೆ:ಉನ್ನತ ಮೂಲಗಳ ಪ್ರಕಾರ, 2022-23 ನೇ ಸಾಲಿನ ಆಯವ್ಯಯಕ್ಕಾಗಿ ರಾಜ್ಯ ಸರ್ಕಾರ ಮಾಡುವ ಸಾಲದ ಪ್ರಮಾಣ 75 ಸಾವಿರ ಕೋಟಿ ರೂ.ಗಳ ಗಡಿ ತಲುಪಲಿದೆ. ಕಳೆದ ಸಾಲಿನಲ್ಲಿ ತೆರಿಗೆಗಳ ಮೂಲಕ ರಾಜ್ಯ ಸರ್ಕಾರ 1.11 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಸಂಗ್ರಹಿಸಿದ್ದು, ಈ ಪೈಕಿ 80 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಬದ್ಧತಾ ವೆಚ್ಚಕ್ಕೆ ಖರ್ಚು ಮಾಡಿದೆ. ಸರ್ಕಾರಿ ನೌಕರರ ವೇತನ, ಪಿಂಚಣಿ, ಮಾಡಿದ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಸೇರಿದಂತೆ ಹಲವು ಬದ್ಧತಾ ವೆಚ್ಚಗಳಿಗೆ ಸರ್ಕಾರ ಹಣ ಪಾವತಿಸುವುದು ಅನಿವಾರ್ಯ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಾಲವನ್ನೇ ಮುಖ್ಯವಾಗಿ ನೆಚ್ಚಿಕೊಳ್ಳುವ ಸ್ಥಿತಿ ಇದ್ದು, ಅದೇ ಕಾಲಕ್ಕೆ ಅಬಕಾರಿ, ಪೆಟ್ರೋಲ್, ಡೀಸೆಲ್ ಬಿಟ್ಟರೆ ಬೇರೆ ವಸ್ತುಗಳ ಮೇಲೆ ತೆರಿಗೆ ಹೇರುವ ಅವಕಾಶವೂ ಸರ್ಕಾರಕ್ಕೆ ಇಲ್ಲ. ಆದರೆ ಅಬಕಾರಿ ಬಾಬ್ತಿನಲ್ಲಿ ಹೇರಲಾಗಿರುವ ತೆರಿಗೆ ಪ್ರಮಾಣ ದೇಶದಲ್ಲೇ ಗರಿಷ್ಟ ಮಟ್ಟದ್ದಾಗಿದ್ದು, ಇನ್ನೂ ಹೆಚ್ಚು ತೆರಿಗೆ ಹೇರುವುದು ಸರ್ಕಾರಕ್ಕೆ ಮುಜುಗರದ ವಿಷಯ.
ಇಷ್ಟಾದರೂ ಮದ್ಯದ ಮೇಲೆ ಇನ್ನಷ್ಟು ತೆರಿಗೆ ಹೇರುವ ಪ್ರಸ್ತಾಪ ಸರ್ಕಾರದ ಮುಂದಿದೆ. ಉಳಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯದ ಪಾಲಿನ ಸುಂಕ ವಿಧಿಸುವುದೂ ಕಷ್ಟದ ಕೆಲಸ ಎನ್ನುತ್ತವೆ ಮೂಲಗಳು.
ಇಂಧನ ಬೆಲೆ ಏರಿಕೆ ಸದ್ಯಕ್ಕಿಲ್ಲ:ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ನೂರು ಡಾಲರ್ ಮೀರಿದ್ದು,ಇದರಿಂದಾಗಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ಕಾಯುತ್ತಿವೆ. ಆದರೆ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬರುವವರೆಗೆ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮಾಡದಂತೆ ಕೇಂದ್ರ ಸರ್ಕಾರ ತಡೆಹಿಡಿದಿದ್ದು, ಮಾರ್ಚ್ 15 ರ ನಂತರ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಕಾಣಲಿದೆ. ಹೀಗೆ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಯಾದ ಕಾಲಕ್ಕೆ ಅವುಗಳ ಮೇಲೆ ರಾಜ್ಯ ಹೇರುವ ಸುಂಕವೂ ಅಧಿಕವಾದರೆ ಜನರ ಆಕ್ರೋಶ ಭುಗಿಲೇಳಬಹುದು ಎಂಬುದು ರಾಜ್ಯ ಸರ್ಕಾರದ ಆತಂಕ. ಹಾಗಾಗಿ, ಹೊಸ ತೆರಿಗೆ ಹೇರಲಾಗದೆ, ಹೊಸ ಯೋಜನೆಗಳನ್ನು ಕೊಡುವ ಅನಿವಾರ್ಯತೆಗೆ ಸಿಲುಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲು ಹರಸಾಹಸ ಮಾಡುವುದು ಅನಿವಾರ್ಯವೇ ಆಗಿದೆ ಎಂದು ಹೇಳಲಾಗುತ್ತಿದೆ.