ಬೆಂಗಳೂರು: ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ಭ್ರಷ್ಟಾಚಾರ ಕಾಂಗ್ರೆಸ್ ಆಡಳಿತದ ಒಂದು ಭಾಗವಾಗಿತ್ತು. ಅವರ ಪಾಪ ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಜನ ಇದ್ಯಾವುದನ್ನೂ ಒಪ್ಪಿಕೊಳ್ಳಲ್ಲ, ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದು ಹಾಸ್ಯಾಸ್ಪದ. ತಮ್ಮ ಕೈಗೆ ಮಸಿ ಅಂಟಿದೆ ಅದನ್ನು ಅವರು ನೋಡಿಕೊಳ್ಳಲಿ. ಕಾಂಗ್ರೆಸ್ನವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ನೇತಾಜಿ ಸುಭಾಷ್‍ಚಂದ್ರ ಬೋಸ್ ಜನ್ಮ ದಿನಾಚರಣೆ ನಿಮಿತ್ತ ವಿಧಾನಸೌಧದ ಬಳಿಯಿರುವ ನೇತಾಜಿ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಲೋಕಾಯುಕ್ತ ಮುಚ್ಚಿದ್ದ ಪುಣ್ಯಾತ್ಮರು. ಲೋಕಾಯುಕ್ತ ಮುಚ್ಚಿ ಇಂದು ನಮಗೆ ಪಾಠ ಹೇಳುತ್ತಿದ್ದಾರ.
ಸಿದ್ದರಾಮಯ್ಯ ಸೇರಿ ಇವರೆಲ್ಲರ ವಿರುದ್ಧ 59 ಕೇಸ್ಗಳು ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಹಾಗಾಗಿ, ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಇವರ ವಿರುದ್ಧದ ಎಲ್ಲ ಕೇಸ್ ಮುಚ್ಚಿ ಹಾಕಲು ಬಿ ರಿಪೋರ್ಟ್ ಹಾಕಿದ್ದರು. ಯಾವುದೇ ಕ್ರಮ ಕೈಗೊಳ್ಳದೇ ಕೇಸ್ ಮುಚ್ಚಿ ಹಾಕಿದ್ದರು. ಎಸಿಬಿಯಲ್ಲಿ ಅವರು ಬಿ- ರಿಪೋರ್ಟ್ಗೆ ಹಾಕಿದ್ದ ಕೇಸ್ಗಳನ್ನು ನಾವು ಲೋಕಾಯುಕ್ತಕ್ಕೆ ಕೊಡುತ್ತಿದ್ದೇವೆ. ಲೋಕಾಯುಕ್ತ ಮುಚ್ಚಿ, ಭ್ರಷ್ಟಾಚಾರದ ಜತೆ ಸೇರಿ ಸರ್ಕಾರ ನಡೆಸಿದವರು ಇವರೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರ ಭ್ರಷ್ಟಾಚಾರ ನಿಲ್ಲಿಸಿ ಅಂತ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?: ಭ್ರಷ್ಟಾಚಾರದ ಗಂಗೋತ್ರಿಯೇ ಕಾಂಗ್ರೆಸ್, ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್‌ನವರು, ಶೇ 40 ರಿಂದ ಶೇ 60ರಷ್ಟು ಪ್ರೀಮಿಯಂ ಕೊಟ್ಟಿರುವ ದಾಖಲೆ ಸಿದ್ದರಾಮಯ್ಯ ಅವರ ಸರ್ಕಾರದ್ದು. ಬೆಂಗಳೂರಿನ 800 ಕೋಟಿಯ ಶೇ 40 - 60ರಷ್ಟು ಪ್ರೀಮಿಯಂ ಕೊಟ್ಟ ಶೂರರು ಕಾಂಗ್ರೆಸ್‌ನವರು. ಇಷ್ಟು ಓಪನ್ ಆಗಿ ಪ್ರೀಮಿಯಂ ಕೊಟ್ಟು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ನವರ ಸೋಗಲಾಡಿತನ. ತಾವು ಭ್ರಷ್ಟಾಚಾರ ಮಾಡಿ, ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಪ್ರತಿಭಟನೆ ಮಾಡುತ್ತಿದಾರೆ. ನಮ್ಮ ವಿರುದ್ಧದ ಆರೋಪಕ್ಕೆ ದಾಖಲೆಗಳಿದ್ದರೆ ಕಾಂಗ್ರೆಸ್‌ನವರು ಕೊಡಲಿ, ಲೋಕಾಯುಕ್ತಕ್ಕೆ ದಾಖಲೆ ಕೊಡಲಿ, ತನಿಖೆ ಆಗಲಿ ಎಂದು ಸವಾಲೆಸೆದರು.
ಅವರ ಟೀಕೆಗಳನ್ನು ಸ್ವಾಗತ ಮಾಡುತ್ತೇನೆ:ಮೋದಿ ಅವರನ್ನು ಸಿದ್ದರಾಮಯ್ಯ ಹಿಟ್ಲರ್ಗೆ ಹೋಲಿಸಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಾನು ಅವರ ಟೀಕೆಗಳನ್ನು ಸ್ವಾಗತ ಮಾಡುತ್ತೇನೆ. ಟೀಕೆಗಳನ್ನು ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಕಾಣುತ್ತೇವೆ. ಮೋದಿ ಅವರು ಈಗ ವಿಶ್ವವ್ಯಾಪಿಯ ನಾಯಕ, ಜನಮನ್ನಣೆ ಗಳಿಸಿದ ನಾಯಕ. ಅವರ ಬಗ್ಗೆ ಇರುವ ಸದಾಭಿಪ್ರಾಯ, ಇತ್ತೀಚಿನ ದಿನಗಳಲ್ಲಿ ಯಾವುದೇ ಬೇರೆ ಪ್ರಧಾನಿಗಳ ಬಗ್ಗೆ ಇಲ್ಲ. ಅಂತವರ ಬಗ್ಗೆ ಬೈದರೆ ಜನ ನಂಬುತ್ತಾರಾ?. ಮೋದಿ ಅವರನ್ನು ಬೈದರೆ ಆಕಾಶಕ್ಕೆ ಉಗುಳಿದ ಹಾಗಾಗುತ್ತದೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಮೋದಿ ಅವರನ್ನು ಮೌತ್ ಕಾ ಸೌದಾಗರ್ ಅಂದರು. ಆವತ್ತು ಮೋದಿಯವರಿಗೆ ಓಟು ಜಾಸ್ತಿ ಬಿತ್ತು, ಜನ ಮನ್ನಣೆ ಹೆಚ್ಚಾಯಿತು. ಕಾಂಗ್ರೆಸ್‌ನವರು ಏನೇ ಹೇಳಿದರೂ ಜನ ನಮ್ಮ ಪರ ಇದ್ದಾರೆ ಎಂದರು.