ಬೆಂಗಳೂರು: ಖಾದಿ ಗ್ರಾಮೋದ್ಯಮಗಳ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಆಧುನಿಕ ಶೈಲಿಗಳು ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಖಾದಿ ಉದ್ಯಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಖಾದಿ ಉತ್ಸವ 2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇಡಿಕೆಗೆ ತಕ್ಕಂತೆ ಉತ್ಪನ್ನಗಳ ಸಿದ್ದಪಡಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೇ, ಸ್ವರಾಜ್ಯದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ಖಾದಿ ಉದ್ಯಮಕ್ಕೆ ಅತಿ ಹೆಚ್ಚು ಮಹತ್ವ ನೀಡಿದ್ದರು. ಇದಕ್ಕೆ ಜನ ಸ್ಪಂಧಿಸಿ ಯಶಸ್ವಿಯೂ ಆಗಿತ್ತು. ಜತೆಗೆ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು, ಆ ಮೂಲಕ ಸ್ವದೇಶಿ ಬಟ್ಟೆಗಳ ಬಳಕೆಗೆ ಪ್ರೋತ್ಸಾಹ ನೀಡಿದ್ದರು ಎಂದು ತಿಳಿಸಿದರು.
ಕೃಷಿ ಇಲಾಖೆಯನ್ನು ಹೊರತು ಪಡಿಸಿ ಜವಳಿ ಕ್ಷೇತ್ರ ದೇಶದಲ್ಲಿಯೇ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಆದರೆ, ತಂತ್ರಜ್ಞಾನ ಬದಲಾಗಿದ್ದು ಪಾಲಿಸ್ಟರ್ ಉತ್ಪಾದನೆ ಪ್ರಾರಂಭವಾಗಿ ಖಾದಿ ಬೇಡಿಕೆ ಕುಸಿದಿತ್ತು. ಆದರೆ, ಇದೀಗ ಬದಲಾವಣೆಯಾಗಿದ್ದು, ಖಾದಿ ಬಟ್ಟೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆರ್ಗಾನಿಕ್ ಬಟ್ಟೆಗೆ ಫ್ಯಾಷನ್ ಪ್ರಪಂಚದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಖಾದಿ ಬಟ್ಟೆಗಳಿಗೆ ದೊಡ್ಡ ಮಟ್ಟದ ಬೇಡಿಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾದಿ ಉದ್ಯಮಕ್ಕೆ ಅಂತರಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ದೊಡ್ಡ ಬೇಡಿಕೆ ಉಂಟಾಗಲಿದೆ ಎಂದು ವಿವರಿಸಿದರು.
ಈಗಾಗಲೇ ನೇಕಾರರ ಉತ್ಪನ್ನಗಳನ್ನು ಆನ್ಲೈನ್ ಮಾರುಕಟ್ಟೆ ನಿರ್ಮಾಣವಾಗಿದೆ. ಆ ಮೂಲಕ ಮಧ್ಯವರ್ತಿಗಳ ಹಾವಳಿಯಿಲ್ಲದೇ. ಈ ವರ್ಷ ಐದು ಲಕ್ಷ ಮಹಿಳೆಯರಿಗೆ ಮಾರುಕಟ್ಟೆ ಜೋಡಿಸಲಾಗಿದೆ ಎಂದು ಅವರು ವಿವರಿಸಿದರು.