ಕರ್ನಾಟಕ

karnataka

ETV Bharat / state

ನ್ಯಾಯಾಧೀಶರಾದರೆ ಲಕ್ಷಾಂತರ ರೂ. ಸಂಬಳ: ನ್ಯಾಯಾಂಗ ವೃತ್ತಿ ಆಯ್ಕೆಗೆ ಓಕ ಕರೆ

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಲಾ ಅಕಾಡೆಮಿ ಆಯೋಜಿಸಿರುವ ಆನ್ ಲೈನ್ ಸರಣಿ ಉಪನ್ಯಾಸಕ್ಕೆ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಚಾಲನೆ ನೀಡಿ, ‘ನ್ಯಾಯಾಂಗದ ಭವಿಷ್ಯ’ಕುರಿತು ಮಾತನಾಡಿದರು.ರೆಡ್ಡಿ ಆಯೋಗ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದು,ಅದು ಜಾರಿಯಾದಲ್ಲಿ ನ್ಯಾಯಾಂಗ ಅಧಿಕಾರಿಗಳ ವೇತನ 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಗಣನೀಯವಾಗಿ ಹೆಚ್ಚಳವಾಗಲಿದೆ. ಹಾಲಿ ನ್ಯಾಯಾಂಗ ಅಧಿಕಾರಿಗಳ ವೇತನ ಖಾಸಗಿ ವಲಯದ ಉದ್ಯೋಗಿಗಳ ವೇತನದಷ್ಟೇ ಆಕರ್ಷಣೀಯವಾಗಿರಲಿದೆ ಎಂದರು.

ಮುಖ್ಯ ನ್ಯಾಯಮೂರ್ತಿ ಓಕ ಕರೆ
ಮುಖ್ಯ ನ್ಯಾಯಮೂರ್ತಿ ಓಕ ಕರೆ

By

Published : Nov 2, 2020, 10:03 PM IST

ಬೆಂಗಳೂರು :ನ್ಯಾ. ಪಿ. ವಿ. ರೆಡ್ಡಿ ಆಯೋಗದ ವರದಿ ಜಾರಿ ನಂತರ ನ್ಯಾಯಾಧೀಶರ ವೇತನ ಭತ್ಯೆ ಗಮನಾರ್ಹವಾಗಿ ಏರಿಕೆಯಾಗಲಿದ್ದು, ಸಾರ್ವಜನಿಕ ಸೇವೆ ಮಾಡುವ ಮನಸ್ಸುಳ್ಳ ಯುವ, ದಕ್ಷ ವಕೀಲರು ನ್ಯಾಯಾಂಗ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಬೇಕು ಎಂದು ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಲಾ ಅಕಾಡೆಮಿ ಆಯೋಜಿಸಿರುವ ಆನ್ ಲೈನ್ ಸರಣಿ ಉಪನ್ಯಾಸಕ್ಕೆ ಚಾಲನೆ ನೀಡಿ ‘ನ್ಯಾಯಾಂಗದ ಭವಿಷ್ಯ’ಕುರಿತು ಮಾತನಾಡಿದರು. ಎರಡು ಮೂರು ದಶಕಗಳ ಹಿಂದೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಂಗ ಅಧಿಕಾರಿಗಳ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ, ಮೂಲಸೌಕರ್ಯಗಳ ಕೊರತೆ ನಡುವೆ ಅವರು ಒಂದು ದ್ವಿಚಕ್ರ ವಾಹನ ಕೊಳ್ಳುವುದು, ಜೊತೆಗೆ ಜೀವನ ನಡೆಸುವುದೂ ಕೂಡ ಕಷ್ಟವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ, ಶೆಟ್ಟಿ ಆಯೋಗ, ಪದ್ಮನಾಭ ಆಯೋಗದ ವರದಿಗಳ ನಂತರ ನ್ಯಾಯಾಂಗ ಅಧಿಕಾರಿಗಳಿಗೆ ನೀಡುವ ವೇತನ ಹಾಗೂ ಸವಲತ್ತುಗಳನ್ನು ಸಾಕಷ್ಟು ಸುಧಾರಣೆಯಾಗಿವೆ.

ಇದೀಗ ರೆಡ್ಡಿ ಆಯೋಗ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದು, ಸದ್ಯ ಸಾಂಕ್ರಾಮಿಕ ರೋಗವಿರುವ ಕಾರಣ ಅದನ್ನು ಜಾರಿ ಮಾಡಿಲ್ಲ. ಅದು ಜಾರಿಯಾದಲ್ಲಿ ನ್ಯಾಯಾಂಗ ಅಧಿಕಾರಿಗಳ ವೇತನ 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಗಣನೀಯವಾಗಿ ಹೆಚ್ಚಳವಾಗಲಿದೆ. ಹಾಲಿ ನ್ಯಾಯಾಂಗ ಅಧಿಕಾರಿಗಳ ವೇತನ ಖಾಸಗಿ ವಲಯದ ಉದ್ಯೋಗಿಗಳ ವೇತನದಷ್ಟೇ ಆಕರ್ಷಣೀಯವಾಗಿರಲಿದೆ ಎಂದರು.

ಸದ್ಯ ಸಿವಿಲ್ ನ್ಯಾಯಾಧೀಶರು ಆರಂಭಿಕ ಹಂತದಲ್ಲಿ 84ಸಾವಿರ ಮತ್ತು ಜಿಲ್ಲಾ ನ್ಯಾಯಾಧೀಶರು 1.56 ಲಕ್ಷ ಮಾಸಿಕ ವೇತನ ಜೊತೆಗೆ ಹಲವು ಭತ್ಯೆ ಮತ್ತು ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಹೆಚ್ಚು ಹೆಚ್ಚು ಯುವ ವಕೀಲರು ನ್ಯಾಯಾಂಗವನ್ನು ವೃತ್ತಿಯನ್ನಾಗಿ ಆಯ್ದುಕೊಳ್ಳಬೇಕು. ನ್ಯಾಯಾಂಗ ಅಧಿಕಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ, ಅವರ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಪ್ರಕರಣಗಳ ವಿಚಾರಣೆ ನಡೆಸಿ ಆತ್ಮಸಾಕ್ಷಿಗೆ ಅನುಗುಣವಾಗಿ ನ್ಯಾಯದಾನ ಮಾಡಬೇಕು. ಆಗ ಸಿಗುವ ಆತ್ಮತೃಪ್ತಿಗೆ ಸಮನಾದುದು ಬೇರೊಂದಿಲ್ಲ. ಜೊತೆಗೆ ನ್ಯಾಯಾಂಗ ಅಧಿಕಾರಿಗಳಿಗೆ ಸಮಾಜದಲ್ಲಿ ಉತ್ತಮ ಗೌರವವೂ ಇದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಾಗಿದ್ದು, ನ್ಯಾಯಾಂಗ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಿ ನ್ಯಾಯಾಂಗ ಘನತೆಯನ್ನು ಎತ್ತಿ ಹಿಡಿಯಬೇಕಾದ ಹೊಣೆಯನ್ನು ಯುವವಕೀಲರು ನಿರ್ವಹಿಸಬೇಕಿದೆ ಎಂದು ಸಿಜೆ ಹೇಳಿದರು.

ABOUT THE AUTHOR

...view details