ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಕೋರ್ಟ್‌ಗಳು ನ್ಯಾಯದಾನ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದು, ಕೆಲ ವಕೀಲರು ಸೂಕ್ತ ಕಾರಣಗಳಿಲ್ಲದೆ ಕಲಾಪಕ್ಕೆ ಗೈರು ಹಾಜರಾಗುವುದು, ಬಹಿಷ್ಕರಿಸುತ್ತಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಅನಗತ್ಯ ಕಾರಣಗಳಿಗಾಗಿ ಕಲಾಪಗಳಿಂದ ದೂರ ಉಳಿಯದಂತೆ ವಕೀಲ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ರಾಜ್ಯದ ಎಲ್ಲ ವಕೀಲ ಸಂಘಗಳಿಗೆ ಪತ್ರ ಬರೆದಿರುವ ಮುಖ್ಯ ನ್ಯಾಯಮೂರ್ತಿಗಳು, ವಕೀಲರು ಯಾವುದೇ ಕಾರಣಕ್ಕೂ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿಯಬಾರದು. ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ನ್ಯಾಯಾಲಯಗಳಿಗೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ನ್ಯಾಯಾಲಯಗಳ ಕಲಾಪ ಸ್ಥಗಿತಗೊಳಿಸದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗರಿಷ್ಠ ಪ್ರಮಾಣದಲ್ಲಿ ನ್ಯಾಯದಾನ ಮಾಡಲಾಗುತ್ತಿದೆ. ಪ್ರಸ್ತುತ ಬಹುತೇಕ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದ್ದು, ಸದ್ಯದಲ್ಲೇ ಎಲ್ಲ ಕೋರ್ಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ. ಆದರೆ,ಇತ್ತೀಚೆಗೆ ಮಂಡ್ಯ ಮತ್ತು ದಾವಣಗೆರೆ ಸೇರಿ ಹಲವೆಡೆ ವಕೀಲರು ನಾನಾ ಕಾರಣಗಳಿಗಾಗಿ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸುತ್ತಿರುವುದು, ಗೈರಾಗುತ್ತಿರುವ ಬಗ್ಗೆ ವರದಿ ಬಂದಿವೆ ಎಂದಿದ್ದಾರೆ.
ಓದಿ:ಆ್ಯಂಬುಲೆನ್ಸ್ ಟೆಂಡರ್ ರದ್ದು : ಆರೋಗ್ಯ ಸಚಿವರನ್ನು ಪ್ರತಿವಾದಿಯಾಗಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್
ಇದರಿಂದ ನ್ಯಾಯದಾನಕ್ಕೆ ತೊಂದರೆಯಾಗುವುದಷ್ಟೇ ಅಲ್ಲದೆ, ಕಕ್ಷಿದಾರರಿಗೂ ಸಮಸ್ಯೆಯಾಗಲಿದೆ. ಜತೆಗೆ ಇತರೆ ವಕೀಲರಿಗೂ ತೊಂದರೆಯಾಗಲಿದೆ ಎಂದಿರುವ ಸಿಜೆ, ನ್ಯಾಯಾಲಯಗಳ ಕಲಾಪದಿಂದ ವಕೀಲರು ಹೊರಗುಳಿಯುವ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸುಪ್ರೀಂ ಕೋರ್ಟ್ ಅಭಿಪ್ರಾಯಗಳನ್ನು ಉಲ್ಲೇಖಿಸಿ, ವಕೀಲರು ನ್ಯಾಯಾಲಯಗಳ ಕಲಾಪಗಳಿಂದ ಹೊರಗುಳಿಯುವುದಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.