ಬೆಂಗಳೂರು: ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾಗಿರುವ ಕುರಿತು, ಮಾಹಿತಿ ಸಂಗ್ರಹಿಸಲು ಅಧ್ಯಯನ ಸಮಿತಿ ರಚಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿಯಲ್ಲಿ ಇಳಿಕೆಯಾಗಿದೆ. ಇದಕ್ಕೆ ಮತದಾರರಲ್ಲಿ ಜಾಗೃತಿ ಕೊರತೆಯೂ ಕಾರಣವಾಗಿರಬಹುದು ಎಂದರು.
ಯಾವ ಕಾರಣಕ್ಕಾಗಿ ನೋಂದಣಿ ಕಡಿಮೆಯಾಗಿದೆ ಎಂಬುದರ ಬಗ್ಗೆ ಈವರೆಗೆ ಯಾವುದೇ ಅಧ್ಯಯನ ಮಾಡಿಲ್ಲ. ಆದರೆ, ಈಗ ಕಾರಣ ಏನು ಎನ್ನುವುದನ್ನು ತಿಳಿಯಲು ಒಂದು ಅಧ್ಯಯನ ಸಮಿತಿ ರಚನೆ ಮಾಡುವುದಾಗಿ ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ 2020ರ ಜನವರಿ 16ಕ್ಕೆ ಅನ್ವಯವಾಗುವಂತೆ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 68,049 ಮತದಾರರಿದ್ದಾರೆ. 2014ಕ್ಕೆ ಹೋಲಿಕೆ ಮಾಡಿದರೆ 26,303 ಮತದಾರರು ಕಡಿಮೆಯಾಗಿದ್ದು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 1,02,287 ಮತದಾರರಿದ್ದು, 3,950 ಮತದಾರರು ಹೆಚ್ಚಾಗಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 24,941 ಮತದಾರರಿದ್ದು, 6,868 ಮತದಾರರು ಕಡಿಮೆಯಾಗಿದ್ದಾರೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 17,610 ಮತದಾರರಿದ್ದು,19,306 ಮತದಾರರು ಕಡಿಮೆಯಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಷ್ಟು ಕಡಿಮೆ ಹೆಸರು ಮತದಾರರ ಪಟ್ಟಿಯಲ್ಲಿರಲು ಸಾಧ್ಯವಿಲ್ಲ ಎಂದರು. ಇನ್ನು ಐದು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಈಗ ಮತದಾರರ ನೋಂದಣಿ ಕಡಿಮೆಯಾಗಿದ್ದರೂ ಮುಂದಿನ ದಿನದಲ್ಲಿ ನೋಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಆಗುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು.