ಬೆಂಗಳೂರು:ನಗರಕ್ಕೆ ಬಂದಿದ್ದ ವಿದೇಶಿ ವ್ಯಕ್ತಿಯಲ್ಲಿ ಕಂಡುಬಂದಿರುವುದು ಮಂಕಿಪಾಕ್ಸ್ ಅಲ್ಲ ಎಂಬುದು ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ವ್ಯಕ್ತಿಯ ಮಾದರಿ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ಎಂದು ದೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, 'ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ಎಂದು ಧೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
'ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಸೋಂಕು ಕಂಡುಬಂದಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳ ಊತ ಮುಂತಾದ ಲಕ್ಷಣಗಳ ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಆಗಮಿಸಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣ ಕಂಡು ಬಂದಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚಿನ ಶುಶ್ರೂಷೆ ನೀಡಲಾಗುತ್ತಿದೆ. ವ್ಯಕ್ತಿಯ ಮೈಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳು ಕಂಡು ಬಂದಿತ್ತು. ಈ ಬಗ್ಗೆ ನಿಗಾ ವಹಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಇದರ ಸ್ಯಾಂಪಲ್ ಅನ್ನು ಪುಣೆಯ ಎನ್.ಐ.ವಿ(ರಾಷ್ಟ್ರೀಯ ವೈರಾಲಜಿ ಸಂಸ್ಥೆ) ಗೆ ಕಳುಹಿಸಿದ್ದರು. ಇದೀಗ ವರದಿಯಲ್ಲಿ ಚಿಕನ್ ಪಾಕ್ಸ್ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ:INTERESTING FACTS: 'ನೆನಪು' ಉಳಿಯುವುದು ಹೇಗೆ? ನೆನಪಿಗೂ ನಿದ್ರೆಗೂ ಸಂಬಂಧವಿದೆಯಾ?