ಬೆಂಗಳೂರು:ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಗೆ ಉಂಡೆನಾಮ ಹಾಕಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನೆಲ್ಲ ದೋಚಿ ಪರಾರಿ ಆಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಡಿಸಿಪಿ ಅಣ್ಣಾಮಲೈ ತಂಡ ಯಶಸ್ವಿಯಾಗಿದೆ.
ಹೋಮ-ಹವನದ ನೆಪದಡಿ ಪಂಗನಾಮ... ಆರೋಪಿಗಳ ಹೆಡೆಮುರಿ ಕಟ್ಟಿದ ಅಣ್ಣಾಮಲೈ ತಂಡ - ಹೋಮ
ನಿಮ್ಮ ಮನೆ ವಾಸ್ತು ಸರಿಯಿಲ್ಲ, ನೀವು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿರುವ ದೋಷ ಖಂಡಿತವಾಗಿಯೂ ಪರಿಹಾರವಾಗುತ್ತದೆ ಎಂದು ಹೇಳಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಐನಾತಿ ಕಳ್ಳರ ತಂಡವೊಂದು ಇದೀಗ ಪೊಲೀಸರ ಅಥಿತಿಯಾಗಿದೆ.
ವಾಸ್ತು ದೋಷ, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ ಸರಿ ಇಲ್ಲವೆಂದು ಕೇಳಿಕೊಂಡು ಬರುತ್ತಿದ್ದವರ ಮನೆಗಳಲ್ಲಿ ಬಂಧಿತರ ಗುಂಪು ಹೋಮ-ಹವನ ನಡೆಸುತ್ತಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿ ಆಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ವಿವಿಧ ಠಾಣೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ಚೇತನ್ ಚಂದ್ರಕಾಂತ್, ರಾಜೆಶ್ ಹಣಪತ್ ರಾವ್ ಥಾಂಬೆ, ಅಜಿತ್ ಕುಮಾರ್ ಅಲಿಯಾಸ್ ಜೊಲ್ಲು, ರಾಜು ಅಲಿಯಾಸ್ ಗೂದೆ, ಶಿವರಾಜ್ ಅಲಿಯಾಸ್ ಕಪ್ಪೆ ಶಿವ ಹಾಗೂ ಅರುಣ್ ಅಲಿಯಾಸ್ ಸುನಿ ಎಂಬುವವರು ಬಂಧಿತ ಆರೋಪಿಗಳು. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದು, ಅವುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಹೋಮ-ಹವನ ಮಾಡುವ ವಿಧಾನವನ್ನು ಮಹಾರಾಷ್ಟ್ರದ ಅವಿನಾಶ್ ಎಂಬುವವರಿಂದ ಕಲಿತ್ತಿದ್ದರಂತೆ. ಇದನ್ನೇ ಕಳ್ಳತನದಂತಹ ಕೃತ್ಯಗಳಿಗೆ ಬಂಡವಾಳ ಮಾಡಿಕೊಂಡು ಮನೆಗಳನ್ನು ದೋಚುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಬಂಧಿತರಾಗಿದ್ದು, ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗಿದೆ.