ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ಗೂ ಹಾಗೂ ಇತರ ಸಂಘಟನೆಗಳ ಮಧ್ಯ ಸಾಕಷ್ಟು ವ್ಯತ್ಯಾಸವಿದೆ. ಇದು ಕನ್ನಡಿಗರ ಅಸ್ಮಿತೆಯ ಚಿರಂಜೀವಿ ಸಂಸ್ಥೆ. ಇಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶವೇ ಇರುವುದಿಲ್ಲ. ರಾಜಕೀಯ ಮಾಡುವವರಿಗೆ ಅಥವಾ ಸಮಯ ಸಾಧಕರಿಗೆ ಇಲ್ಲಿ ಅವಕಾಶ ಇಲ್ಲ. ಇಂತಹ ಅತೀ ಸೂಕ್ಷ್ಮತೆಯ ಸ್ಪಷ್ಟತೆಗಳಿರುವುದರಿಂದಲೇ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಜನರು ಅಪಾರವಾದ ವಿಶ್ವಾಸವಿಟ್ಟಿದ್ದಾರೆ. ಅದರ ಪ್ರತಿರೂಪವಾಗಿ ಇವತ್ತಿಗೆ 2065 ಜನರು ದತ್ತಿ ನಿಧಿಯನ್ನು ಇಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ 2021ನೇ ಸಾಲಿನ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು 2021ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳಿಗಾಗಿ ಈ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿವಿಧ 49 ವಿಭಾಗಗಳ ದತ್ತಿ ಪ್ರಶಸ್ತಿಗೆ 54 ಕೃತಿಗಳನ್ನು ಆಯ್ಕೆಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿಗಳನ್ನು ನೀಡುವ ಮೂಲಕ ಅಮೋಘವಾಗಿರುವ ಪರಂಪರೆ ಜಾರಿಯಲ್ಲಿದೆ. ಅನೇಕ ದತ್ತಿ ದಾನಿಗಳು ವಿವಿಧ ವಿಚಾರಗಳಿಗೆ ಅವರ ಭಾವನೆಗಳಿಗೆ ತಕ್ಕಂತೆ ದತ್ತಿ ನಿಧಿಯನ್ನು ಇಟ್ಟಿರುತ್ತಾರೆ. ದತ್ತಿ ದಾನಿಗಳ ಆಶಯಕ್ಕೆ ಧಕ್ಕೆ ಆಗದಂತೆ ಕಾಲಕಾಲಕ್ಕೆ ಸರಿಯಾಗಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಕೆಲವು ಮಾನದಂಡಗಳನ್ನು ಪಾಲಿಸುವ ಅವಶ್ಯಕತೆ ಇದೆ. ವಾಸ್ತವದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಕ್ಷರ ಕೃತಿಗಳನ್ನು ನೀಡುವ ಮೂಲಕ ತಮ್ಮ ಸಾಧನೆಗೆ ಮುಂದಾಗಿರುವ ಎಲ್ಲರೂ ಪ್ರಶಸ್ತಿಗೆ ಯೋಗ್ಯರೇ. ಆದರೆ ಕೆಲವು ನಿಯಮಗಳು ಇರುವುದರಿಂದ ಎಲ್ಲರಿಗೂ ಸನ್ಮಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಕನ್ನಡಕ್ಕೆ ಬಲ ತರುವ ನಿರೀಕ್ಷೆ: ರಾಜ್ಯದಲ್ಲಿ ಸರ್ಕಾರದಿಂದ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅಮೋಘವಾಗಿದೆ. ಇನ್ನು ಮುಂದೇ ಆಡಳಿತದ ಜತೆ, ನ್ಯಾಯಾಂಗ, ವ್ಯಾಪಾರ, ಉದ್ಯೋಗದಲ್ಲಿ ಕನ್ನಡ ಕಡ್ಡಾಯವಾಗಲಿದೆ ಎನ್ನುವ ವಿಶ್ವಾಸ ಪರಿಷತ್ತಿಗಿದೆ. ಜಿಲ್ಲಾ ನ್ಯಾಯಾಲಗಳಲ್ಲಿ ಕನ್ನಡದಲ್ಲೇ ನ್ಯಾಯದಾನ ಮಾಡಬೇಕು ಎನ್ನುವುದನ್ನು ಕಾನೂನಿನಲ್ಲಿ ಸೇರಿಸಲಾಗಿರವುದು ಕನ್ನಡಕ್ಕೆ ಬಲ ತರುವ ನಿರೀಕ್ಷೆಯಲ್ಲಿ ಇದ್ದೆವೆ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿ "ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಒಲವು ಬಯಕೆ ಹುಟ್ಟವಂತೆ ಮಾಡುವುದಕ್ಕೆ ಎಲ್ಲರೂ ಮುಂದಾಗಬೇಕು. ಇಂದು ದೊಡ್ಡ ದೊಡ್ಡಮನೆ, ಬಂಗಲೆ ಕಟ್ಟುವವರನ್ನು ನೋಡಿದ್ದೇನೆ. ಆದರೆ ಅದರಲ್ಲೊಂದು ಓದುವ ಕೊಠಡಿ ರಚಿಸುವುದಿಲ್ಲ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಉಳಿದಿಲ್ಲ. ಬೆಂಗಳೂರಿನಲ್ಲಿ ಹೆಚ್ಚಾಗಿ ಮಾತಾಡುವ ಮನೆಯಲ್ಲಿ ಕನ್ನಡದ ವಾತಾವರಣ ಇಲ್ಲದಾಗಿದೆ. ಕನ್ನಡದ ಸೊಗಡೆ ಇಲ್ಲದ ಸಂವಹನ ಭಾಷೆಯನ್ನು ಉಪಯೋಗಿಸುತ್ತಿರುವವರು ಕಾಣಲು ಸಿಗುತ್ತಿದ್ದಾರೆ. ನಮ್ಮ ಭಾಷೆಯನ್ನು ನಾವೇ ಬಳಸಿದಿದ್ದರೆ ಮುಂದಿನ ಪೀಳಿಗೆಗೆ ಏನನ್ನೂ ಕೊಟ್ಟಂತಾಗುವುದಿಲ್ಲ. ಪುಸ್ತಕಗಳು ಹೆಚ್ಚು ಹೆಚ್ಚು ಪ್ರಕಟವಾಗಬೇಕು. ಪ್ರಕಟಗೊಂಡಿರುವ ಎಲ್ಲ ಪುಸ್ತಕಗಳನ್ನು ಓದುವ ಸಂಸ್ಕೃತಿ ಹೆಚ್ಚಾದಾಗ ಮಾತ್ರ ಕನ್ನಡ ಉಳಿಯುವುದು ಬೆಳೆಯುವದು ಎಂದು ಅಭಿಪ್ರಾಯಪಟ್ಟರು.