ಬೆಂಗಳೂರು:ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿರುವ ಪಾಲಿಕೆಯ ಮಾಜಿ ಸದಸ್ಯ ಎನ್.ಆರ್. ರಮೇಶ್ ವಿರುದ್ಧವೇ ಆರೋಪ ಕೇಳಿ ಬಂದ ಹಿನ್ನೆಲೆ ಹೈಕೋರ್ಟ್, ಅರ್ಜಿ ವಿಚಾರಣೆ ಮುಂದುವರಿಸುವ ಕುರಿತು ನಿಲುವು ತಿಳಿಸುವಂತೆ ಸೂಚಿಸಿದೆ.
ಈ ಕುರಿತು ಎನ್.ಆರ್. ರಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿ. ಎಸ್ ಪ್ರಹ್ಲಾದ್ ಪರ ವಕೀಲರು ಅರ್ಜಿದಾರ ಎನ್.ಆರ್ ರಮೇಶ್ ವಿರುದ್ಧವೇ ಪ್ರತ್ಯಾರೋಪ ಮಾಡಿದರು. ತಮಗೆ ಬೇಕಿರುವ ಇಬ್ಬರು ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಲು ರಮೇಶ್ ಯತ್ನಿಸಿದರು. ಅದಕ್ಕೆ ಒಪ್ಪದಿದ್ದಕ್ಕೆ ಸುಳ್ಳು ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಗುತ್ತಿಗೆಯಲ್ಲಿ ಅರ್ಜಿದಾರರು ಹಸ್ತಕ್ಷೇಪ ಮಾಡುತ್ತಿದ್ದಾರೆಯೇ?. ಅರ್ಜಿದಾರರ ಪತ್ನಿಯೇ ಪಾಲಿಕೆ ಸದಸ್ಯೆಯಾಗಿದ್ದಾರೆ. ಅವರು ಪಾಲಿಕೆ ಸಭೆಯಲ್ಲಿ ಈ ಅಕ್ರಮಗಳನ್ನು ಪ್ರಸ್ತಾಪಿಸಿಲ್ಲವೇಕೆ? ಎಂದು ಎನ್. ಆರ್. ರಮೇಶ್ ಪರ ವಕೀಲರನ್ನು ಪ್ರಶ್ನಿಸಿತು. ನಂತರ ಅರ್ಜಿದಾರರ ವಿರುದ್ಧವೇ ಆರೋಪಗಳು ಕೇಳಿ ಬಂದಿರುವುದರಿಂದ ಅರ್ಜಿ ವಿಚಾರಣೆ ಮುಂದುವರಿಸುವ ಬಗ್ಗೆ ನಿಮ್ಮ ನಿಲುವು ತಿಳಿಸಬೇಕು ಎಂದು ರಮೇಶ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಬಿಬಿಎಂಪಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದರಿಂದ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ವಿರುದ್ಧ ತನಿಖೆಗೆ ನಡೆಸಲು ಆದೇಶಿಸಬೇಕು ಎಂದು ಎನ್.ಆರ್ ರಮೇಶ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.