ಬೆಂಗಳೂರು:ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನಗರ ಪೂರ್ವ ವಿಭಾಗದ ಪೊಲೀಸರ ತನಿಖೆ ಮುಕ್ತಾಯ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಕೊರೊನಾ ವಕ್ಕರಿಸಿದ್ದರಿಂದ ಆರೋಪಿ ಸಾಗರ್ ಮೊಹಮ್ಮದ್ ಬಾಬಾ ಶೇಕ್ನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ. ಸೋಂಕಿನಿಂದ ಗುಣಮುಖನಾಗಿದ್ದು ಇನ್ನೆರಡು ದಿನಗಳಲ್ಲಿ ಈತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಬಾಕಿ ಉಳಿದಿರುವ ಎಫ್ಎಸ್ಎಲ್ ಹಾಗೂ ಡಿಎನ್ಎ ವರದಿ ಬಂದ ಬಳಿಕ ಇನ್ನೊಂದು ವಾರದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಣಕಾಸು ವೈಷಮ್ಯದಿಂದಲೇ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. ಕೃತ್ಯ ನಡೆದ ದಿನದಂದು ಎಲ್ಲಾ ಆರೋಪಿಗಳು ಒಂದೇ ಕಡೆ ಇರುವುದು ಟವರ್ ಲೊಕೇಷನ್ ಮೂಲಕ ಗೊತ್ತಾಗಿದೆ. ಜಪ್ತಿ ಮಾಡಿಕೊಂಡ ಆರೋಪಿಗಳ ಮೊಬೈಲ್ಗಳನ್ನು ರಿಟ್ರೀವ್ ಮಾಡಿದಾಗ ಸಂತ್ರಸ್ತೆಯ ವಿಡಿಯೋ ಹಾಗೂ ಇನ್ನಿತರೆ ಸಹಚರರೊಂದಿಗೆ ಫೋನ್ನಲ್ಲಿ ಮಾತನಾಡಿರುವುದು ಗೊತ್ತಾಗಿದೆ. ಆರೋಪಿಗಳ ಫಿಂಗರ್ ಪ್ರಿಂಟ್ ಸಹ ಮ್ಯಾಚ್ ಆಗಿದೆ. ಇನ್ನಿತರೆ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:C M Udasi Funeral: ಉದಾಸಿ ಅಂತ್ಯಕ್ರಿಯೆಗೆ ವಿರಕ್ತಮಠದಲ್ಲಿ ಸಕಲ ಸಿದ್ಧತೆ