ಬೆಂಗಳೂರು:ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಗಳಿಗೆ ಪೂರಕ ಮತ್ತು ಬಲವಾದ ಸಾಕ್ಷ್ಯಾಧಾರಗಳಿರದಿದ್ದಲ್ಲಿ ಅಂತಹ ಆರೋಪವನ್ನು ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬೆಳಗಾವಿ ಜಿಲ್ಲೆ ರಾಯಭಾಗದ ನಿವಾಸಿ ಸಂತೋಷ್ ಅವರು ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ನ್ಯಾಯಪೀಠ ವಿಚಾರಣಾ ನ್ಯಾಯಾಲಯ ಆದೇಶವನ್ನು ಮಾರ್ಪಾಡು ಮಾಡಿ ಆದೇಶಿಸಿದೆ. ಜತೆಗೆ, ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವಿಧಿಸಿದ್ದ ಶಿಕೆಯನ್ನು ರದ್ದುಪಡಿಸಿದೆ. ಆದರೆ, ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ವಿಧಿಸಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಅಲ್ಲದೆ, ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ) ಪ್ರಕರಣದಲ್ಲಿ ಅಪರಾಧಿ ಮೃತರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಕುಮ್ಮಕ್ಕು ನೀಡಿರುವುದಕ್ಕೆ ಬಲವಾದ ಸಾಕ್ಷ್ಯಾಧಾರಗಳಿರಬೇಕು. ಇದಕ್ಕೆ ನಿಖರವಾದ ಪುರಾವೆಗಳಿರಬೇಕು. ಅಲ್ಲದೆ, ಸತತ ಪ್ರಚೋಧನೆ ನೀಡಿರುವ ಪರಿಣಾಣ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪುವಂತಿರಬೇಕು. ಇಲ್ಲವಾದಲ್ಲಿ ಆರೋಪವನ್ನು ಪರಿಗಣಿಸಲಾಗದು ಎಂದು ತಿಳಿಸಿದ ನ್ಯಾಯಪೀಠ ಶಿಕ್ಷೆಯನ್ನು ರದ್ದುಪಡಿಸಿದೆ.
ಆರೋಪಗಳು ಪ್ರತ್ಯೇಕ:ಆತ್ಮಹತ್ಯೆಗೆ ಪ್ರಚೋದನೆ ನೀಡುವುದು (ಐಪಿಸಿ ಸೆಕ್ಷನ್ 306) ಮತ್ತು ಪತಿ ಹಾಗೂ ಪತಿಯ ಸಂಬಂಧಿಕರಿಂದ ಕಿರುಕುಳ (ಐಪಿಸಿ 498A) ನೀಡಿರುವ ಆರೋಪಗಳು ಪ್ರತ್ಯೇಕವಾಗಿರಲಿದ್ದು, ಒಂದು ಪ್ರಕರಣದಲ್ಲಿ ಆರೋಪ ಮುಕ್ತರಾದರು ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಆರೋಪಿ ಸಂತೋಷ್ ಅವರಿಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿರುವ ನ್ಯಾಯಪೀಠ, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.