ಬೆಂಗಳೂರು: 2020ರ ಸಾಲಿನಲ್ಲಿ ರಾಜ್ಯ ನಿರ್ಣಾಯಕವಾಗಬಲ್ಲಂಥ ಚುನಾವಣೆಳೇನು ಸಾಕ್ಷಿಯಾಗಿಲ್ಲ. ಆದರೆ, ಮೂರು ಪಕ್ಷಗಳಿಗೆ ತಮ್ಮ ಪ್ರತಿಷ್ಠೆ, ಸಂಘಟನಾ ಶಕ್ತಿ, ಪಕ್ಷದ ಬಲವರ್ಧನೆಯನ್ನು ಸಾಬೀತುಪಡಿಸಲು ವೇದಿಕೆಯೊಂದನ್ನು ಕಲ್ಪಿಸಿತು. 2020 ರಾಜ್ಯದ ಪಾಲಿಗೆ ಚುನಾವಣಾ ವರ್ಷ ಏನೂ ಆಗಿರಲಿಲ್ಲ.
ಎರಡು ಉಪಚುನಾವಣೆ ಮತ್ತು ನಾಲ್ಕು ಕೌನ್ಸಿಲ್ ಚುನಾವಣೆ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗೆ ರಾಜ್ಯ ಸಾಕ್ಷಿಯಾಯಿತು. ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಬಂದಿದ್ದ ಮುನಿರತ್ನರಿಗೆ ಆರ್.ಆರ್.ನಗರ ಉಪಚುನಾವಣೆ ನಿರ್ಣಾಯಕವಾಗಿತ್ತು. ಜೊತೆಗೆ ಜೆಡಿಎಸ್ ಶಾಸಕರ ನಿಧನದಿಂದ ತೆರವಾಗಿದ್ದ ಶಿರಾ ಕ್ಷೇತ್ರದ ಉಪ ಚುನಾವಣೆಯೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯದ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಈ ಎರಡು ಉಪಚುನಾವಣೆಯ ಫಲಿತಾಂಶದಿಂದ ಸರ್ಕಾರದ ಅಸ್ತಿತ್ವಕ್ಕಾಗಲಿ, ಭವಿಷ್ಯಕ್ಕಾಗಲಿ ಯಾವುದೇ ಪರಿಣಾಮ ಇಲ್ಲವಾಗಿದ್ದರೂ, ಕೋವಿಡ್ ಬಳಿಕದ ಮೊದಲ ಚುನಾವಣೆಯಾಗಿದ್ದರಿಂದ ಮತದಾರರು ಸರ್ಕಾರದ ಪರ ಇದ್ದಾರೆ ಎಂಬುದನ್ನು ತೋರಿಸುವ ದಿಕ್ಸೂಚಿಯಾಗಿತ್ತು.
ಇದರ ಜೊತೆಗೆ ಸರ್ಕಾರದ ಆತ್ಮ ವಿಶ್ವಾಸ ಹೆಚ್ಚಿಸುವುದರೊಂದಿಗೆ ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ಕಳುಹಿಸಲು ಉಪಚುನಾವಣೆ ಒಂದು ಅಸ್ತ್ರವಾಗಿ ಪರಿಣಮಿಸಿತು. ಅಧಿವೇಶನದಲ್ಲೇ ಸಿಎಂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಎರಡು ಕ್ಷೇತ್ರಗಳನ್ನು ಗೆದ್ದು ತೋರಿಸುವಂತೆ ಸವಾಲು ಹಾಕಿದ್ದರು. ಹಾಗಾಗಿ ಈ ಎರಡೂ ಕ್ಷೇತ್ರಗಳ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು.
ಇದನ್ನೂ ಓದಿ : ಬಿಎಸ್ವೈ-ಹೆಚ್ಡಿಕೆ ಅಡ್ಜಸ್ಟ್ಮೆಂಟ್ ಏನಿದೆಯೋ ಗೊತ್ತಿಲ್ಲ; ಹಳೇ ದೋಸ್ತಿಗಳ ಬಗ್ಗೆ ಡಿಕೆಶಿ ಮಾರ್ಮಿಕ ಮಾತು
ಹೀಗಾಗಿನೇ ಆಡಳಿತರೂಢ ಬಿಜೆಪಿ ಪಕ್ಷ ಈ ಎರಡು ಉಪಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿತು. ಆರ್.ಆರ್.ನಗರ ಹಾಗೂ ಶಿರಾದಲ್ಲಿ ಕಮಲ ಅರಳುವ ನಿಟ್ಟಿನಲ್ಲಿ ತನ್ನೆಲ್ಲಾ ಕಾರ್ಯತಂತ್ರವನ್ನು ರೂಪಿಸಿತು. ಆರ್.ಆರ್.ನಗರ ಉಪಚುನಾವಣೆಯಲ್ಲಿ ಅಭ್ಯರ್ಥಿ ಮುನಿರತ್ನರ ವೈಯ್ಯಕ್ತಿಕ ವರ್ಚಸ್ಸಿನಿಂದ ಬಿಜೆಪಿ ಗೆಲುವಿನ ನಗೆ ಬೀರಿತು. ಆದರೆ, ಪಕ್ಷದ ನೆಲೆನೇ ಇಲ್ಲದ ಶಿರಾದಲ್ಲಿ ಬಿಜೆಪಿ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿತು. ಕೆ.ಆರ್.ಪೇಟೆ ಬಳಿಕ ಬಿಜೆಪಿ 2020ರ ಉಪ ಚುನಾವಣೆಯಲ್ಲಿ ಶಿರಾದಲ್ಲಿ ತನ್ನ ಖಾತೆಯನ್ನು ತೆರೆಯುವ ಮೂಲಕ ತನ್ನ ಸಂಘಟನೆಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿತು. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವುದರೊಂದಿಗೆ ಬಿಜೆಪಿ ತನ್ನ ಬಲವನ್ನು ಪ್ರದರ್ಶಿಸಿತು.
ಇತ್ತ ನಾಲ್ಕು ಸ್ಥಾನಕ್ಕೆ ನಡೆದ ಕೌನ್ಸಿಲ್ ಚುನಾವಣೆಯಲ್ಲೂ ಬಿಜೆಪಿ ಜಯದ ನಗೆ ಬೀರಿ, ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಿತು. ನಾಲ್ಕೂ ಸ್ಥಾನವನ್ನು ತನ್ನ ತೆಕ್ಕೆಗೆ ಹಾಕುವ ಮೂಲಕ ಬಿಜೆಪಿ ತನ್ನ ಚುನಾವಣಾ ಗೆಲುವಿನ ಪಾರುಪತ್ಯವನ್ನು ಮುಂದುವರಿಸಿತು. ಎರಡು ಜೆಡಿಎಸ್ ಹಾಗೂ ಒಂದು ಕಾಂಗ್ರೆಸ್ ಬಳಿ ಇದ್ದ ಪರಿಷತ್ ಸ್ಥಾನವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಗೆದ್ದು ಬೀಗಿತು. ಅಲ್ಲಿಗೆ 2020ರಲ್ಲಿ ನಡೆದ ಚುನಾವಣೆಗಳು ಬಿಜೆಪಿ ಪಾಲಿಗೆ ವಿಜಯಲಕ್ಷ್ಮಿಯಾಗಿ ಪರಿಣಮಿಸಿತು.